ಶರದ್ ಪವಾರ್ ಭೇಟಿ ಮಾಡಿದ ನಿತೀಶ್: ಪ್ರಧಾನಿ ಅಭ್ಯರ್ಥಿ ಕುರಿತು ಹೇಳಿದ್ದೇನು?
Team Udayavani, Sep 7, 2022, 7:50 PM IST
ನವದೆಹಲಿ: ಬಿಜೆಪಿಯನ್ನು ಎದುರಿಸಲು ವಿರೋಧ ಪಕ್ಷಗಳನ್ನು ಸಾಮಾನ್ಯ ವೇದಿಕೆಗೆ ತರುವ ಪ್ರಯತ್ನದ ಭಾಗವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದರು.
ವಿರೋಧ ಪಕ್ಷಗಳ ಮೈತ್ರಿಯ ಬಗ್ಗೆ ಚರ್ಚೆ ನಡೆಸಿದರು ಮತ್ತು ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಅವರನ್ನು ಭೇಟಿ ಮಾಡಿದರು.
30 ನಿಮಿಷಗಳ ಸಭೆಯ ನಂತರ 2024 ರ ಲೋಕಸಭೆ ಚುನಾವಣೆಗೆ ತಮ್ಮ ಮೈತ್ರಿಕೂಟದ ನಾಯಕನನ್ನು ನಿರ್ಧರಿಸುವ ಕುರಿತು ಮಾತನಾಡಿದ ನಿತೀಶ್, ”ಮೊದಲು ಒಗ್ಗೂಡುವುದು ಮುಖ್ಯ ಎಂದರು. ಬಿಜೆಪಿಗೆ ಪರ್ಯಾಯವನ್ನು ಪ್ರಸ್ತುತಪಡಿಸುವ ಸಮಯ ಪಕ್ವವಾಗಿದೆ, ಬಿಜೆಪಿಯೊಂದಿಗೆ ಇಲ್ಲದ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪವಾರ್ ಮತ್ತು ನಾನು ಉತ್ಸುಕರಾಗಿದ್ದೇವೆ. ಮೈತ್ರಿಕೂಟದ ನಾಯಕನನ್ನು ನಂತರ ನಿರ್ಧರಿಸಬಹುದು. ಮೊದಲು ಒಟ್ಟಾಗಿ ಬರುವುದು ಮುಖ್ಯ” ಎಂದರು.
ಬಿಹಾರದಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯಿಂದ ಹೊರಬಂದು ಆರ್‌ಜೆಡಿ ಮತ್ತು ಇತರ ಪಕ್ಷಗಳೊಂದಿಗೆ ಸರ್ಕಾರ ರಚಿಸಿದ ನಂತರ ಕುಮಾರ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಮೂರು ದಿನಗಳ ಪ್ರವಾಸದಲ್ಲಿದ್ದು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗುತ್ತಿದ್ದಾರೆ.