ಬಿಹಾರದಲ್ಲಿ ವಶಪಡಿಸಿಕೊಂಡ ಮದ್ಯದ ಬಾಟಲಿಗಳಿಂದ ಬಳೆ ತಯಾರಿಕೆ
Team Udayavani, Sep 10, 2022, 8:30 PM IST
ಪಾಟ್ನಾ: ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸುವ ದೃಷ್ಟಿಯಿಂದ ವಶಪಡಿಸಿಕೊಂಡ ಮದ್ಯದ ಬಾಟಲಿಗಳಿಂದ ಗಾಜಿನ ಬಳೆಗಳನ್ನು ತಯಾರಿಸಲು ಬಿಹಾರ ಸರ್ಕಾರ ಉತ್ತೇಜನ ನೀಡುತ್ತಿದೆ.
ಗ್ರಾಮೀಣಾಭಿವೃದ್ಧಿ ಯೋಜನೆಯಾದ “ಜೀವಿಕ’ ಅಡಿಯಲ್ಲಿ ಬಳೆ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಬಿಹಾರದ ಅಬಕಾರಿ ಇಲಾಖೆ ಒಂದು ಕೋಟಿ ರೂ.ಗಳನ್ನು ಮೂಲ ಬಂಡವಾಳವಾಗಿ ಬಿಡುಗಡೆ ಮಾಡಿದೆ.
“ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಜೆಸಿಬಿ ಬಳಸಿ ನಾಶಮಾಡಲಾಗುತ್ತದೆ. ಇದರಿಂದ ಬೃಹತ್ ಪ್ರಮಾಣದ ತ್ಯಾಜ್ಯ ಸೃಷ್ಟಿಯಾಗುತ್ತದೆ. ಇನ್ನು ಮುಂದೆ ಗಾಜಿನ ಬಳೆಗಳನ್ನು ತಯಾರಿಸಲು ಪುಡಿ ಮಾಡಲಾದ ಬಾಟಲಿಗಳ ಮೂಲಕ ಬಳೆ ಮಾಡುವ ಬಗ್ಗೆ “ಜೀವಿಕ’ ಯೋಜನೆ ಅಡಿ ತರಬೇತಿ ನೀಡಲಾಗುತ್ತದೆ. ಈಗಾಗಲೇ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಕ್ರಮ ಕೈಗೊಂಡಿದೆ’ ಎಂದು ಬಿಹಾರ ಅಬಕಾರಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.