ಮುಂಬಯಿ ಶೇರು ನಿರಂತರ 7ನೇ ದಿನ ವಿಕ್ರಮ: 268 ಅಂಕ ಜಂಪ್
Team Udayavani, Mar 19, 2019, 11:30 AM IST
ಮುಂಬಯಿ : ಚುನಾವಣಾ ಪೂರ್ವ rally ಯ ಪ್ರಯುಕ್ತ ನಿರಂತರ 7ನೇ ದಿನವಾಗಿ ಇಂದು ಮಂಗಳವಾರವೂ ಮುನ್ನುಗ್ಗಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ದಿನದ ವಹಿವಾಟನ್ನು 268.40 ಅಂಕಗಳ ಉತ್ತಮ ಏರಿಕೆಯೊಂದಿಗೆ 38,363.47 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಆರು ದಿನಗಳ ಗೆಲುವಿನ ಓಟದಲ್ಲಿ ಸೆನ್ಸೆಕ್ಸ್ 1,420 ಅಂಕ ಗಳಿಸಿದೆ. ಡಾಲರ್ ಎದುರು ರೂಪಾಯಿಯ ಬಲವರ್ಧನೆ, ಭಾರತೀಯ ಶೇರು ಮಾರುಕಟ್ಟೆಗೆ ನಿರಂತರ ವಿದೇಶ ಹೂಡಿಕೆ ಹರಿದು ಬರುತ್ತಿರುವುದು ಮತ್ತು ಆ ಕಾರಣಕ್ಕೆ ದೇಶದ ವಾಣಿಜ್ಯ ಕೊರತೆ ಕಡಿಮೆಯಾಗುತ್ತಿರುವುದು – ಇವೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಪೇಟೆಯಲ್ಲಿ ನಿರಂತರ ತೇಜಿ ಕಂಡು ಬರುತ್ತಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 70.20 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 11,509.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,875 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1.411 ಶೇರುಗಳು ಮುನ್ನಡೆ ಸಾಧಿಸಿದವು; 1.295 ಶೇರುಗಳು ಹಿನ್ನಡೆಗೆ ಗುರಿಯಾದವು; 169 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.