ಚಾರ್‌ಧಾಮ್ ನಾಳೆ ಓಪನ್; ಭಕ್ತರಿಗಿಲ್ಲ ಅವಕಾಶ
Team Udayavani, Apr 25, 2020, 6:23 AM IST
ಡೆಹ್ರಾಡೂನ್: ಚಾರ್‌ಧಾಮ್ ಯಾತ್ರೆ ಎಂದರೆ, ಅದೊಂದು ಕಿಕ್ಕಿರಿದ ಭಕ್ತಿ ಸಂಭ್ರಮ. ಆದರೆ, ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರೀನಾಥ ದೇಗುಲಗಳನ್ನು ತೆರೆಯಲು ಸಜ್ಜಾಗಿದ್ದರೂ, ಯಾತ್ರಿಕರಿಗೆ ಮಾತ್ರ ಪ್ರವೇಶ ಅನುಮತಿ ನೀಡಲಾಗಿಲ್ಲ.
ಉತ್ತರಾಖಂಡದ ನಾಲ್ಕು ದೇಗುಲಗಳ ಯಾತ್ರಾ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದು, ಕೋವಿಡ್-19 ಆತಂಕವಿರುವ ಹಿನ್ನೆಲೆಯಲ್ಲಿ, ಅಪಾರ ಜನ ಸ್ತೋಮ ಕಾಣುತ್ತಿದ್ದ ಉದ್ಘಾಟನಾ ಕಾರ್ಯಕ್ರಮಗಳಿಗೆ ಭಕ್ತರೇ ಇಲ್ಲದಂತಾಗಿದೆ. ಏ.26ರಂದು ಗಂಗೋತ್ರಿ, ಯಮುನೋತ್ರಿ ದೇಗುಲಗಳನ್ನು ತೆರೆಯುವ ಮೂಲಕ ಈ ವರ್ಷದ ಚಾರ್‌ಧಾಮ್ ಯಾತ್ರೆ ಆರಂಭಗೊಳ್ಳುತ್ತದೆ. ಏ.29ಕ್ಕೆ ಕೇದಾರನಾಥ್ ದೇಗುಲದ ಬಾಗಿಲು ತೆರೆಯಲಿದ್ದು, ಬದರಿನಾಥ್ ಪ್ರವೇಶ ಉದ್ಘಾಟನೆ ಮೇ 15ಕ್ಕೆ ಮುಂದೂಡಲ್ಪಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ದೇಗುಲಗಳ ಅರ್ಚಕರಿಗೆ ಮಾತ್ರವೇ ಪ್ರವೇಶ ಅನುಮತಿ ನೀಡಲಾಗಿದೆ. ಲಾಕ್‌ಡೌನ್ ಮುಗಿದ ಬಳಿಕ, ಕೇಂದ್ರ ಸರ್ಕಾರದ ಸೂಚನೆ ಆಧರಿಸಿ, ಯಾತ್ರೆಯ ದಿನಾಂಕಗಳನ್ನು ನಿಗದಿಪಡಿಸಲಾಗುತ್ತದೆ.