ಜಮ್ಮು-ಕಾಶ್ಮೀರ ಕೇಂದ್ರಾಡಳಿತ ; ಆಕ್ಷೇಪ ವ್ಯಕ್ತಪಡಿಸಿದ ಚೀನಾಕ್ಕೆ ಬಿಸಿ ಮುಟ್ಟಿಸಿದ ಭಾರತ
Team Udayavani, Oct 31, 2019, 6:14 PM IST
ನವದೆಹಲಿ: ಜಮ್ಮು-ಕಾಶ್ಮೀರವನ್ನು ಇಬ್ಭಾಗ ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವ ಕ್ರಮ ಕಾನೂನು ಬಾಹಿರ ಹಾಗೂ ಇದು ಚೀನಾದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಲಿದೆ ಎಂದು ಚೀನಾ ಆಕ್ಷೇಪ ಎತ್ತಿದ್ದು, ಇದಕ್ಕೆ ಭಾರತ ಖಡಕ್ ತಿರುಗೇಟು ನೀಡಿದೆ.
ಲಡಾಖ್ ಮತ್ತು ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ..ಹೀಗಾಗಿ ನಮ್ಮ ಆಂತರಿಕ ವಿಚಾರದಲ್ಲಿ ಚೀನಾ ಮೂಗು ತೂರಿಸುವುದನ್ನು ಬಿಡಬೇಕು ಎಂದು ಭಾರತ ಪ್ರತಿಕ್ರಿಯೆ ನೀಡಿದೆ.
ನಮ್ಮ ಪ್ರಾದೇಶಿಕ ಅಖಂಡತೆಯನ್ನು ಮತ್ತು ಭಾರತದ ಸಾರ್ವಭೌಮತ್ವವನ್ನು ಇತರ ದೇಶಗಳೂ ಗೌರವಿಸಬೇಕು ಎಂಬುದಾಗಿ ನಾವು ನಿರೀಕ್ಷಿಸುತ್ತೇವೆ. ಜಮ್ಮು-ಕಾಶ್ಮೀರದ ಭೂಪ್ರದೇಶಗಳನ್ನು ಚೀನಾ ಕಾನೂನು ಬಾಹಿರವಾಗಿ ಆಕ್ರಮಿಸುತ್ತಿದೆ. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವ ಬಗ್ಗೆ ಚೀನಾಕ್ಕೆ ಆಕ್ಷೇಪ ವ್ಯಕ್ತಪಡಿಸಲು ಯಾವುದೇ ಅಧಿಕಾರ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಗುರುವಾರ ತಿಳಿಸಿದ್ದಾರೆ.