ಹಳಿಗಳಲ್ಲಿ ಇನ್ನು ಕಂಪನಿ ರೈಲು ಸಂಚಾರ?

100 ದಿನಗಳಲ್ಲಿ ಟೆಂಡರ್‌ ಕರೆಯಲು ನಡೆದಿದೆ ಸಿದ್ಧತೆ

Team Udayavani, Jun 20, 2019, 6:00 AM IST

ನವದೆಹಲಿ: ರೈಲ್ವೆ ಸೇವೆಯನ್ನು ಇನ್ನಷ್ಟು ದಕ್ಷ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರ ಈಗ ಖಾಸಗಿ ಕಂಪನಿಗಳಿಗೆ ರೈಲು ನಿರ್ವಹಣೆ ಜವಾಬ್ದಾರಿಯನ್ನು ವರ್ಗಾಯಿಸುವ ಬಗ್ಗೆ ಚಿಂತನೆ ನಡೆಸಿದೆ.

ಯೋಜನೆಯ ಪ್ರಕಾರ, ಈ ಬಗ್ಗೆ ಮುಂದಿನ 100 ದಿನಗಳಲ್ಲಿ ಟೆಂಡರ್‌ ಆಹ್ವಾನಿಸಲು ನಿರ್ಧರಿಸಲಾಗಿದೆ. ಕಡಿಮೆ ದಟ್ಟಣೆ ಇರುವ ಮತ್ತು ಪ್ರವಾಸಿ ಸ್ಥಳಗಳಿಗೆ ಸಾಗುವ ರೈಲುಗಳನ್ನು ಮಾತ್ರ ಆರಂಭದಲ್ಲಿ ಖಾಸಗಿ ಕಂಪನಿಗಳಿಗೆ ನೀಡಲಾಗುತ್ತದೆ.

ಐಆರ್‌ಸಿಟಿಸಿ ಜೊತೆಗೆ ಪ್ರಯೋಗ: ರೈಲುಗಳನ್ನು ಖಾಸಗಿಗೆ ನಿರ್ವಹಣೆಗಾಗಿ ನೀಡುವುದ‌ಕ್ಕೂ ಮುನ್ನ ಇದರ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಲು ಎರಡು ರೈಲುಗಳನ್ನು ಐಆರ್‌ಸಿಟಿಸಿಗೆ ಬಿಟ್ಟುಕೊಡಲಾಗುತ್ತದೆ. ಅವುಗಳ ಟಿಕೆಟ್, ಇತರ ಸೇವೆಗಳನ್ನು ಐಆರ್‌ಸಿಟಿಸಿ ನಿರ್ವಹಿಸಲಿದೆ. ಪ್ರಮುಖ ನಗರಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲೇ ಈ ರೈಲುಗಳು ಸಂಚರಿಸಲಿದ್ದು, ಇದಕ್ಕಾಗಿ ರೇಕ್‌ಗಳನ್ನು ಐಆರ್‌ಸಿಟಿಸಿಗೆ ಹಸ್ತಾಂತರಿಸಲಾಗುತ್ತದೆ. ಇದಕ್ಕೆ ವಾರ್ಷಿಕ ಭೋಗ್ಯ ಶುಲ್ಕವನ್ನು ಐಆರ್‌ಸಿಟಿಸಿ ಪಾವತಿ ಮಾಡಲಿದೆ.

ಪ್ರಯೋಗ ಯಶಸ್ವಿಯಾದರೆ ಬಿಡ್‌: ಐಆರ್‌ಸಿಟಿಸಿ ಎರಡು ರೈಲುಗಳನ್ನು ನಿರ್ವಹಿಸಿದ ನಂತರ ಅದರ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಟೆಂಡರ್‌ ಆಹ್ವಾನಿಸಲಾಗುತ್ತದೆ. ಇದಕ್ಕೂ ಮೊದಲು ರೈಲುಗಳ ನಿರ್ವಹಣೆಗೆ ಆಸಕ್ತಿ ಇರುವವರನ್ನು ಗುರುತಿಸಲಾಗುತ್ತದೆ. ಆಗ ಯಾವ ಯಾವ ಕಂಪನಿಗಳು ಆಸಕ್ತಿ ತೋರಿಸುತ್ತವೆ ಎಂಬುದನ್ನು ಆಧರಿಸಿ ಮುಂದುವರಿಯಲಾಗುತ್ತದೆ.

ಸಂಘಟನೆಗಳ ಸಲಹೆ: ರೈಲ್ವೆ ಖಾಸಗೀಕರಣಕ್ಕೆ ಭಾರಿ ವಿರೋಧ ವ್ಯಕ್ತವಾಗಬಹುದಾದ ಸಾಧ್ಯತೆಯ ಹಿನ್ನೆಲೆಯಲ್ಲಿ, ಈ ಪ್ರಕ್ರಿಯೆ ಆರಂಭಕ್ಕೂ ಮುನ್ನ ರೈಲ್ವೆ ನೌಕರರು ಹಾಗೂ ಇತರ ಸಂಘಟನೆಗಳ ಮುಖಂಡರ ಸಲಹೆ ಪಡೆದು, ಅಂತಿಮಗೊಳಿಸಲಾಗುತ್ತದೆ.

ಕೋಚ್ ಫ್ಯಾಕ್ಟರಿಯೂ ಖಾಸಗಿಗೆ: ರೈಲ್ವೆ ಮಂಡಳಿ ಪ್ರಸ್ತಾಪಿಸಿದ ಇನ್ನೊಂದು ಮಹತ್ವದ ಯೋಜನೆಯೆಂದರೆ, ಕೋಚ್ ಹಾಗೂ ಇತರ ಭಾಗಗಳ ಉತ್ಪಾದನೆ ಯೂನಿಟ್‌ಗಳನ್ನೂ ಖಾಸಗಿಯವರಿಗೆ ನೀಡುವುದು. ದೇಶದಲ್ಲಿ ಒಟ್ಟು 7 ಉತ್ಪಾದನಾ ಘಟಕಗಳಿವೆ. ಉತ್ಪಾದನಾ ಘಟಕಗಳು ಮತ್ತು ವರ್ಕ್‌ಶಾಪ್‌ಗ್ಳನ್ನು ಹೊಸ ಸಂಸ್ಥೆಗೆ ವರ್ಗಾಯಿಸಲಾಗುತ್ತದೆ. ಇದಕ್ಕಾಗಿ ಇಂಡಿಯನ್‌ ರೈಲ್ವೇಸ್‌ ರೋಲಿಂಗ್‌ ಸ್ಟಾಕ್‌ ಕಂಪನಿ ಸ್ಥಾಪಿಸಲಾಗುತ್ತದೆ. ಪ್ರತಿ ಉತ್ಪಾದನಾ ಘಟಕದ ಸಿಇಒ ಲಾಭ ನಷ್ಟದ ವರದಿ ಸಿದ್ಧಪಡಿಸಿ, ಅದನ್ನು ಹೊಸ ಸಂಸ್ಥೆಯ ಮೇಲ್ವಿಚಾರಕರಿಗೆ ವರದಿ ಮಾಡಬೇಕಾಗುತ್ತದೆ. ಈಗಾಗಲೇ ಈ ಸಂಬಂಧ ಕಾರ್ಮಿಕ ಸಂಘಟನೆಗಳ ಜೊತೆಗೆ ಮಾತುಕತೆ ನಡೆದಿದ್ದು, ರಾಯ್‌ಬರೇಲಿಯಲ್ಲಿರುವ ಮಾಡರ್ನ್ ಕೋಚ್ ಫ್ಯಾಕ್ಟರಿಯಿಂದಲೇ ಈ ಪ್ರಕ್ರಿಯೆ ಆರಂಭಿಸಲು ನಿರ್ಧರಿಸಲಾಗಿದೆ.

ಸಬ್ಸಿಡಿ ಬಿಡುವಂತೆ ಪ್ರಚಾರ
ಎಲ್ಪಿಜಿ ಸಬ್ಸಿಡಿಯನ್ನು ತೊರೆಯಲು ಕ್ಯಾಂಪೇನ್‌ ಮಾಡಿದಂತೆಯೇ ರೈಲು ಟಿಕೆಟ್ ದರದಲ್ಲೂ ಸಬ್ಸಿಡಿಯನ್ನು ಸ್ವಯಂಪ್ರೇರಿತವಾಗಿ ತೊರೆಯಲು ಪ್ರಚಾರ ಆರಂಭಿಸಲಾಗುತ್ತದೆ. ಪ್ರಯಾಣಿಕರಿಗೆ ಸಬ್ಸಿಡಿ ಸಹಿತ ಹಾಗೂ ಸಬ್ಸಿಡಿ ರಹಿತ ಟಿಕೆಟ್‌ಗಳನ್ನು ಖರೀದಿಸುವ ಅವಕಾಶ ಇರುತ್ತದೆ. ರೈಲ್ವೆ ಮೂಲಗಳ ಪ್ರಕಾರ, ಪ್ರಯಾಣಿಕರ ಸಾಗಣೆ ವಹಿವಾಟಿನಲ್ಲಿ ಶೇ. 53 ರಷ್ಟು ವೆಚ್ಚವಷ್ಟೇ ಟಿಕೆಟ್ ದರದ ಮೂಲಕ ಸಂಗ್ರಹವಾಗುತ್ತದೆ. ಹೀಗಾಗಿ ಸಬ್ಸಿಡಿ ಹೊರತುಪಡಿಸಿ ಟಿಕೆಟ್ ನೀಡುವ ಮೂಲಕ ಈ ಅಂತರವನ್ನು ಕಡಿಮೆ ಮಾಡಲು ರೈಲ್ವೆ ಮಂಡಳಿ ಚಿಂತನೆ ನಡೆಸಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ