ಕೈ ಸಾಮೂಹಿಕ ರಾಜೀನಾಮೆ ಪರ್ವ

Team Udayavani, Jun 29, 2019, 5:30 AM IST

ನವದೆಹಲಿ: ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದನ್ನು ಬೆಂಬಲಿಸಿ, ಎಐಸಿಸಿ ಕಾರ್ಯದರ್ಶಿಗಳು, ದೆಹಲಿ, ಮಧ್ಯಪ್ರದೇಶ, ಹರ್ಯಾಣ ರಾಜ್ಯಗಳ 120ಕ್ಕೂ ಹೆಚ್ಚು ಯುವ ಕಾಂಗ್ರೆಸ್‌ ನಾಯಕರು, ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ, ಕಾಂಗ್ರೆಸ್‌ನಲ್ಲಿ ಉದ್ಭವಿಸಿರುವ ರಾಜೀನಾಮೆ ಪರ್ವ ಈಗ ಮತ್ತೂಂದು ಮಗ್ಗುಲಿಗೆ ಹೊರಳಿದೆ.

ಶುಕ್ರವಾರ ಬೆಳಗ್ಗೆಯಷ್ಟೇ, ಕಾಂಗ್ರೆಸ್‌ನ ಮಾಹಿತಿ ಹಕ್ಕು ವಿಭಾಗ ಮತ್ತು ಮಾನವ ಹಕ್ಕುಗಳ ವಿಭಾಗಕ್ಕೆ ವಿವೇಕ್‌ ಟಂಕಾ ಶುಕ್ರವಾರ ರಾಜೀನಾಮೆ ನೀಡಿದ್ದರು. ಇದರ ಬೆನ್ನಿಗೆ ಎಐಸಿಸಿ ಕಾರ್ಯದರ್ಶಿಗಳ, ವಿವಿಧ ರಾಜ್ಯಗಳ ಕಾಂಗ್ರೆಸ್‌ ನಾಯಕರ ಸಾಮೂಹಿಕ ರಾಜಿನಾಮೆ ಸಲ್ಲಿಕೆಯಾಗಿವೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ತ್ಯಾಗಪತ್ರ ನೀಡಿದ್ದು, ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲವೆಂದು ಸ್ಪಷ್ಟಪಡಿಸಿದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ.

ಸಾಧ್ಯತೆ ಇಲ್ಲ: ರಾಹುಲ್ ಗಾಂಧಿ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಶೇ.1ರಷ್ಟೂ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ‘ಪಿಟಿಐ’ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು ‘ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಶೀಘ್ರದಲ್ಲಿಯೇ ಸಭೆ ಸೇರಲಿದೆ. ರಾಹುಲ್ ರಾಜೀನಾಮೆಯನ್ನು ಸಿಡಬ್ಲ್ಯೂಸಿ ಒಪ್ಪಿಕೊಳ್ಳಬೇಕು. ಅದುವರೆಗೆ ಕೇವಲ ವದಂತಿಗಳೇ ಮುಂದುವರಿಯಲಿವೆ’ ಎಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ