ಕಾಂಗ್ರೆಸ್‌ನಲ್ಲಿ ರಾಜೀನಾಮೆ ಪರ್ವ

ಪಕ್ಷ ಬಲವರ್ಧನೆಗೆ ರಾಜೀನಾಮೆ ಸರಣಿ ಸೇರಿದ ದೇವ್ರಾ, ಸಿಂಧಿಯಾ

Team Udayavani, Jul 8, 2019, 5:00 AM IST

ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಡೋಲಾಯಮಾನವಾಗಿರುವಂತೆಯೇ, ಕಾಂಗ್ರೆಸ್‌ನಲ್ಲಿ ರಾಜೀನಾಮೆ ಸರಣಿ ಭಾನುವಾರವೂ ಮುಂದುವರಿದಿದೆ. ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನಿಕಟವರ್ತಿಗಳಾಗಿರುವ ಮಿಲಿಂದ್‌ ದೇವ್ರಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಭಾನುವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ದೇವ್ರಾ ಮುಂಬೈ ಪ್ರದೇಶ ಕಾಂಗ್ರೆಸ್‌ ಸಮಿತಿ (ಎಂಆರ್‌ಸಿಸಿ) ಅಧ್ಯಕ್ಷರಾಗಿದ್ದರೆ, ಸಿಂಧಿಯಾ ಉತ್ತರ ಪ್ರದೇಶ ಪಶ್ಚಿಮ ಭಾಗದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ಮುಂಬೈ ಮಹಾನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಮಿಲಿಂದ್‌ ದೇವ್ರಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ‘ಜನರು ನೀಡಿದ ತೀರ್ಪನ್ನು ಗೌರವಿಸಿ ಮತ್ತು ಪಕ್ಷಕ್ಕೆ ಉಂಟಾಗಿರುವ ಹಿನ್ನಡೆಗೆ ನೈತಿಕ ಹೊಣೆ ಹೊತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷ ಬಲಪಡಿಸುವ ಅವಕಾಶಕ್ಕಾಗಿ ನಿರೀಕ್ಷಿಸುತ್ತಿದ್ದೇನೆ. ಮಹಾರಾಷ್ಟ್ರದಲ್ಲಿ ಈ ವರ್ಷದಲ್ಲಿಯೇ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮೂವರು ಹಿರಿಯ ನಾಯಕರನ್ನು ಒಳಗೊಂಡ ಸಮಿತಿ ರಚಿಸಬೇಕು. ಅವರ ಮೂಲಕ ಮುಂಬೈ ಪ್ರದೇಶ ಕಾಂಗ್ರೆಸ್‌ ಸಮಿತಿ ತನ್ನ ಕಾರ್ಯಚಟುವಟಿಕೆಗಳು ನಡೆಸುವಂತೆ ಇರಬೇಕು ಎಂದು ಸೂಚಿಸಿದ್ದಾರೆ.

ಇದೇ ವೇಳೆ ಬಿಜೆಪಿ- ಶಿವಸೇನೆ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಅವರ ಪ್ರವರ್ತಿತ ವಂಚಿತ್‌ ಬಹುಜನ್‌ ಅಘಾಡಿ (ವಿಬಿಎ) ಎರಡೂ ಸವಾಲು ಎಸೆಯುವಂಥದ್ದು ಎಂದೂ ಅವರು ಹೇಳಿದ್ದಾರೆ. ಈ ಮೂಲಕ, ವಿಬಿಎ ಜತೆಗೆ ಕಾಂಗ್ರೆಸ್‌ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿದೆ ಎಂಬ ವದಂತಿಗಳಿಗೆ ಸದ್ಯಕ್ಕೆ ತೆರೆ ಎಳೆದಿದ್ದಾರೆ. ಮೇ 23ರ ಬಳಿಕ ಪರಿಸ್ಥಿತಿಗಳೆಲ್ಲವೂ ಬದಲಾವಣೆಯಾಗಲಿದೆ ಎಂದು ರಾಜೀನಾಮೆ ನೀಡಿದ ಬಳಿಕ ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ ದೇವ್ರಾ ತಿಳಿಸಿದ್ದಾರೆ.

‘ಜೂ.26ರಂದು ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದಾಗಲೇ ನಾನು ಹುದ್ದೆ ತ್ಯಜಿಸಬೇಕೆಂದು ಇದ್ದೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ.ವೇಣುಗೋಪಾಲ್ ಸಲಹೆ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ನಿರ್ಧಾರ ಮುಂದೂಡಿದ್ದೆ’ ಎಂದು ಪತ್ರಕರ್ತರಿಗೆ ಮುಂಬೈನಲ್ಲಿ ತಿಳಿಸಿದ್ದಾರೆ. ದೇವ್ರಾ ಸ್ವತಃ ಮುಂಬೈ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿ ನಾಯಕಿ ಪೂನಂ ಮಹಾಜನ್‌ ವಿರುದ್ಧ ಸೋಲು ಅನುಭವಿಸಿದ್ದಾರೆ.

ಸಿಂಧಿಯಾ ರಾಜೀನಾಮೆ: ದೇವ್ರಾ ರಾಜೀನಾಮೆ ಬಳಿಕ ಮಧ್ಯಪ್ರದೇಶದ ಕಾಂಗ್ರೆಸ್‌ ನಾಯಕ, ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಉತ್ತರ ಪ್ರದೇಶ ಪಶ್ಚಿಮ ವಿಭಾಗದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ‘ಜನರು ಚುನಾವಣೆಯಲ್ಲಿ ನೀಡಿದ ತೀರ್ಪು ಮತ್ತು ಸೋಲಿಗೆ ನೈತಿಕ ಹೊಣೆ ಹೊತ್ತು ಹುದ್ದೆ ತ್ಯಜಿಸುತ್ತಿದ್ದೇನೆ. ರಾಹುಲ್ ಗಾಂಧಿಯವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದೇನೆ. ನನ್ನಲ್ಲಿ ನಂಬಿಕೆ ಇರಿಸಿ ಹೊಣೆ ಹೊರಿಸಿ ಪಕ್ಷದ ಸೇವೆ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಟ್ಟದ್ದಕ್ಕೆ ಧನ್ಯವಾದಗಳು’ ಎಂದು ಸಿಂಧಿಯಾ ಟ್ವೀಟ್ ಮಾಡಿದ್ದಾರೆ.

ದೇವ್ರಾ -ನಿರುಪಮ್‌ ಭಿನ್ನಮತ ಸ್ಫೋಟ
ದೇವ್ರಾ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಮತ್ತೂಬ್ಬ ಕಾಂಗ್ರೆಸ್‌ ನಾಯಕ ಸಂಜಯ್‌ ನಿರುಪಮ್‌, ‘ಮಿಲಿಂದ್‌ ದೇವ್ರಾ ಅವರು ರಾಷ್ಟ್ರೀಯ ಮಟ್ಟದ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಇದನ್ನು ರಾಜೀನಾಮೆ ಎನ್ನಬೇಕೋ ಅಥವಾ ರಾಜಕೀಯವಾಗಿ ಮೇಲಿನ ಹುದ್ದೆಗೇರುವ ಮೆಟ್ಟಿಲು ಎನ್ನಬೇಕೋ ಗೊತ್ತಾಗುತ್ತಿಲ್ಲ. ಇಂಥ ‘ಪರಿಶ್ರಮ ಪಡುವ’ ವ್ಯಕ್ತಿಗಳ ಬಗ್ಗೆ ಪಕ್ಷ ಜಾಗರೂಕವಾಗಿರಬೇಕು’ ಎನ್ನುವ ಮೂಲಕ ದೇವ್ರಾ ಅವರ ಕಾಲೆಳೆದಿದ್ದಾರೆ. ಅಲ್ಲದೆ, ಮುಂಬೈ ಕಾಂಗ್ರೆಸ್‌ ಅನ್ನು ಮುಂದುವರಿಸಲು ಮೂವರು ಸದಸ್ಯರ ತಂಡ ರಚಿಸುವ ಸಲಹೆಯು ಪಕ್ಷವನ್ನು ಮತ್ತಷ್ಟು ಹಾಳು ಮಾಡಲಿದೆ ಎಂದೂ ಅವರು ಹೇಳಿದ್ದಾರೆ. ನಿರುಪಮ್‌ ಅವರ ಟ್ವೀಟ್ ಪಕ್ಷದೊಳಗಿನ ಭಿನ್ನಮತವನ್ನು ಬಹಿರಂಗಪಡಿಸಿದೆ.

ಈವರೆಗೆ ರಾಜೀನಾಮೆ ನೀಡಿರುವ ಪ್ರಮುಖರು

•ಮಿಲಿಂದ್‌ ದೇವ್ರಾ, ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ

•ಕಮಲ್ನಾಥ್‌, ಮಧ್ಯಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ

•ರಾಜ್‌ಬಬ್ಬರ್‌, ಉತ್ತರಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ

•ಹರೀಶ್‌ ರಾವತ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ

•ವಿವೇಕ್‌ ಠಂಕಾ, ಎಐಸಿಸಿ ಉಪಾಧ್ಯಕ್ಷ

•ದೀಪಕ್‌ ಬಬಾರಿಯಾ, ಮ.ಪ್ರದೇಶ ಉಸ್ತುವಾರಿ

•ಗಿರೀಶ್‌ ಚೋಡಂಕರ್‌, ಗೋವಾ ಕಾಂಗ್ರೆಸ್‌ ಮುಖ್ಯಸ್ಥ

•ಪೂನಂ ಪ್ರಭಾಕರ್‌, ತೆಲಂಗಾಣ ಉಸ್ತುವಾರಿ

•ವೀರೇಂದ್ರ ರಾಥೋಡ್‌, ಬಿಹಾರ ಉಸ್ತುವಾರಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ