ಅಪರಿಚಿತ ಗುಂಪಿನಿಂದ ಮಾರಣಾಂತಿಕ ಹಲ್ಲೆ, ಕಾಂಗ್ರೆಸ್ ಮುಖಂಡನ ಹತ್ಯೆ

Team Udayavani, Jul 31, 2019, 3:12 PM IST

ತಿರುವನಂತಪುರಂ: ಅಪರಿಚಿತ ಗುಂಪು ಕಾಂಗ್ರೆಸ್ ಮುಖಂಡನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಆ ವ್ಯಕ್ತಿ ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಕೇರಳದ ತ್ರಿಶ್ಶೂರ್ ನಲ್ಲಿ ನಡೆದಿದೆ.

ಚವಾಕ್ಕಾಡ್ ಸಮೀಪದ ಪುನ್ನಾ ಬಳಿ ಗುಂಪೊಂದು ಪುದುವೆಟ್ಟಿಲ್ ನೌಶಾದ್(43) ಮೇಲೆ ಮಂಗಳವಾರ ಸಂಜೆ ಮಾರಣಾಂತಿಕ ಹಲ್ಲೆ ನಡೆಸಿತ್ತು. ನೌಶಾದ್ ಚಾವಾಕ್ಕಾಡ್ ಘಟಕದ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಎಂದು ವರದಿ ತಿಳಿಸಿದೆ.

ಗಂಭೀರವಾಗಿ ಹಲ್ಲೆಗೊಳಗಾದ ನೌಶಾದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ. ಈ ಘಟನೆಯ ಹಿಂದೆ ಎಸ್ ಡಿಪಿಐ ಕೈವಾಡ ಇದ್ದಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ.

ಈ ಸಂದರ್ಭದಲ್ಲಿ ನೌಶಾದ್ ಜತೆಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಎಸ್ ಡಿಪಿಐ ಗೆ ಸೇರಿದ್ದಾರೆನ್ನಲಾದ 15 ಮಂದಿ ಕಾರ್ಯಕರ್ತರು ಹಲ್ಲೆ ನಡೆಸಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ. ಬೈಕ್ ನಲ್ಲಿ ಆಗಮಿಸಿದ್ದ ಅವರು ತಲವಾರು ಮತ್ತು ಆಯುಧಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದಾಗಿ ಕಾಂಗ್ರೆಸ್ ಆರೋಪಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ