ರಾಜಕಾರಣಕ್ಕೆ ಕಾರ್ಪೊರೇಟ್ ಶಕ್ತಿ
Team Udayavani, Aug 18, 2017, 7:15 AM IST
ಹೊಸದಿಲ್ಲಿ: ರಾಜಕೀಯ ಪಕ್ಷಗಳಿಗೆ ಹಣ ಎಲ್ಲಿಂದ ಬರುತ್ತೆ ಎಂಬ ಪ್ರಶ್ನೆಗಳಿಗೆ ಇಲ್ಲೊಂದು ಉತ್ತರವಿದೆ. 2012-13ರಿಂದ 2015-16ರ ನಡುವೆ ಉದ್ದಿಮೆದಾರರಿಂದ ಪಕ್ಷಗಳಿಗೆ 956.77 ಕೋಟಿ ದೇಣಿಗೆ ಸಲ್ಲಿಕೆಯಾಗಿರುವುದು ಬಯಲಾಗಿದೆ.
ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾಮ್ಸ್ì (ಎಡಿಆರ್) ಈ ಮಾಹಿತಿ ಬಹಿರಂಗ ಮಾಡಿದ್ದು, ಒಟ್ಟಾರೆ ದೇಣಿಗೆಯಲ್ಲಿ ಬಿಜೆಪಿಯ ಪಾಲೇ ಶೇ.89ರಷ್ಟಿದೆ ಎಂದಿದೆ. ಅಂದರೆ ಬಿಜೆಪಿ, 2,987 ಉದ್ದಿಮೆದಾರರಿಂದ 705.81 ಕೋಟಿ ರೂ. ದೇಣಿಗೆ ಪಡೆದಿದೆ. ಹಾಗೆಯೇ ಕಾಂಗ್ರೆಸ್ 167 ಉದ್ದಿಮೆದಾರರಿಂದ 198.16 ಕೋಟಿ ರೂ. ದೇಣಿಗೆ ಪಡೆದುಕೊಂಡಿದೆ. ಉಳಿದಂತೆ ಎನ್ಸಿಪಿ 50.73 ಕೋಟಿ, ಸಿಪಿಎಂ 1.89 ಕೋಟಿ, ಸಿಪಿಐ 18 ಲಕ್ಷ ರೂ. ದೇಣಿಗೆ ಪಡೆದಿವೆ.
ವಿಶೇಷವೆಂದರೆ 1933 ಉದ್ಯಮಿಗಳು ಪ್ಯಾನ್ ಸಂಖ್ಯೆ ನೀಡದೇ 384.04 ಕೋಟಿ ರೂ. ದೇಣಿಗೆ ನೀಡಿದ್ದರೆ, ವಿಳಾಸ ನೀಡದೇ 1546 ಕಾರ್ಪೊರೇಟ್ ಕಂಪೆನಿಗಳು 355.08 ಕೋಟಿ ರೂ. ದೇಣಿಗೆ ಕೊಟ್ಟಿವೆ. ಇನ್ನು ಪ್ಯಾನ್ ಇಲ್ಲದೇ, ವಿಳಾಸವೂ ಇಲ್ಲದೇ 1062 ಉದ್ಯಮಿಗಳು 159.67 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಸುಪ್ರೀಂಕೋರ್ಟ್ನ ಆದೇಶದ ಪ್ರಕಾರ 20 ಸಾವಿರ ರೂ.ಗಿಂತ ಹೆಚ್ಚು ದೇಣಿಗೆ ನೀಡುವವರು ತಮ್ಮ ವಿವರ ಸಲ್ಲಿಸಲೇಬೇಕು. ಇದನ್ನು ಪಕ್ಷಗಳು ಸಾರ್ವಜನಿಕಗೊಳಿಸಬೇಕು. ಆದರೆ ಇಲ್ಲಿ ಬಹುತೇಕ ದೇಣಿಗೆದಾರರು ತಮ್ಮ ವಿಳಾಸ ಅಥವಾ ಪ್ಯಾನ್ ಸಂಖ್ಯೆ ನಮೂದಿಸದೇ ಹಣ ನೀಡಿದ್ದಾರೆ.