ಈ ಬಾರಿ ಪ್ರಧಾನಿ ಮೋದಿ ಬರ್ತ್ಡೇ ಕೋವಿಡ್ ಸ್ನೇಹಿ!
Team Udayavani, Aug 27, 2020, 5:45 AM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸೆ.17ರಂದು 70ನೇ ವರ್ಷಕ್ಕೆ ಕಾಲಿಡುತ್ತಿದ್ದು, ಈ ಪ್ರಯುಕ್ತ “ಕೋವಿಡ್ ಸ್ನೇಹಿ’ ಆಗಿ ಹುಟ್ಟುಹಬ್ಬ ಆಚರಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಸಾರ್ವಜನಿಕರಿಗೆ ಮಾಸ್ಕ್ ವಿತರಣೆ, ರಕ್ತದಾನ ಶಿಬಿರ, ಬಡವರಿಗೆ ಹಣ್ಣು, ಆಹಾರ ಸಾಮಗ್ರಿ ವಿತರಿಸಲು ಚಿಂತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಮಂಗಳವಾರ ನಡೆಸಿದ ಪಕ್ಷದ ಪ್ರಧಾನಿ ಕಾರ್ಯದರ್ಶಿಗಳ ಸಭೆಯಲ್ಲಿ ಮೋದಿ ಹುಟ್ಟುಹಬ್ಬ ಅಂಗವಾಗಿ ಹಲವಾರು ಸಲಹೆಗಳನ್ನು ನೀಡಲಾಗಿದೆ. ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ ) ಯೋಜನೆಯನ್ನು ಉತ್ತೇಜಿಸಲು ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಚರ್ಚೆ ನಡೆಸಲಾಗಿದೆ.
ಬಹುತೇಕ ನಾಯಕರು ಹಲವಾರು ವಿಭಿನ್ನ ಸಲಹೆಗಳನ್ನು ನೀಡಿದ್ದು, ಶೀಘ್ರದಲ್ಲೇ ಈ ಬಗ್ಗೆ ಪಕ್ಷವು ನಿರ್ಧಾರವನ್ನು ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.
ಮೋದಿ 70ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ 70 ಸ್ಥಳಗಳಲ್ಲಿ ರಕ್ತದಾನ ಶಿಬಿರ ಆಯೋಜಿಸಲು ಚಿಂತಿಸಲಾಗಿದೆ. ಅಲ್ಲದೇ ಬೂತ್ ಮಟ್ಟದಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ವಿವಿಧ ಕಾರ್ಯಕ್ರಮ ನಡೆಸಲು ಯೋಚಿಸಲಾಗಿದೆ.