ಉತ್ಪಲ್ ಪರೀಕರ್ ಬಿಜೆಪಿ ಬಿಟ್ಟು ವಿರೋಧಿ ಪಕ್ಷಕ್ಕೆ ಹೋಗುವುದಿಲ್ಲ: ವದಂತಿಗೆ ಸಿ.ಟಿ ರವಿ ತೆರೆ
Team Udayavani, Jan 18, 2022, 5:30 PM IST
ಪಣಜಿ: ಉತ್ಪಲ್ ಪರೀಕರ್ ರವರು ಬಿಜೆಪಿಯ ಒಬ್ಬ ಕಾರ್ಯಕರ್ತರು. ಅವರು ಬಿಜೆಪಿಯೊಂದಿಗೇ ಇರಲಿದ್ದಾರೆ, ಮತ್ತು ಪಕ್ಷಕ್ಕಾಗಿ ಕೆಲಸ ಮಾಡಲಿದ್ದಾರೆ. ಬಿಜೆಪಿ ವಿರೋಧವಾಗಿ ಕೆಲಸ ಮಾಡುವ ಪಕ್ಷವೊಂದಕ್ಕೆ ಬಳಕೆಯಾಗಲು ಉತ್ಪಲ್ ರವರನ್ನು ಬಿಡುವುದಿಲ್ಲ ಎಂದು ಬಜೆಪಿ ಗೋವಾ ಉಸ್ತುವಾರಿ ಸಿ.ಟಿ ರವಿ ಹೇಳಿದ್ದಾರೆ.
ಪಣಜಿಯಲ್ಲಿ ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು ಉತ್ಪಲ್ ಪರೀಕರ್ ರವರು ಪ್ರಸಕ್ತ ಚುನಾವಣೆಯಲ್ಲಿ ಪಣಜಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಲಭಿಸದಿದ್ದರೆ ಬಿಜೆಪಿ ವಿರೋಧಿ ಪಕ್ಷದಿಂದ ಸ್ಫರ್ಧಿಸಲಿದ್ದಾರೆ ಎಂಬ ಸುದ್ಧಿಯನ್ನು ಸಿ.ಟಿ ರವಿ ಈ ಮೂಲಕವಾಗಿ ತಳ್ಳಿಹಾಕಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಉಳಿದಿದೆ. ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರೀಕರ್ ಪುತ್ರ ಉತ್ಪಲ್ ರವರು ಪಣಜಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಪಣಜಿ ಕ್ಷೇತ್ರದ ಹಾಲಿ ಶಾಸಕ ಬಾಬುಶ್ ಮೊನ್ಸೆರಾತ್ ರವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿರುವುದರಿಂದ ಉತ್ಪಲ್ ರವರು ಬೇರೆ ಪಕ್ಷ ಸೇರಲಿದ್ದಾರೆ ಎಂಬ ವದಂತಿ ರಾಜ್ಯಾದ್ಯಂತ ಭಾರಿ ಚರ್ಚೆಯಾಗುತ್ತಿದೆ.