ಬೆಂಗಳೂರಿನಲ್ಲಿ ರಕ್ಷಣಾ ಬಾಹ್ಯಾಕಾಶ ಏಜೆನ್ಸಿ

Team Udayavani, May 16, 2019, 6:00 AM IST

ಹೊಸದಿಲ್ಲಿ: ನಾಗರಿಕ ಹಾಗೂ ರಕ್ಷಣಾ ಪಡೆಗಳ ಬಳಕೆಗೆ ಉಪಗ್ರಹಗಳ ಉಡಾವಣೆ ಹಾಗೂ ನಿರ್ವಹಣೆಗೆ ಇಸ್ರೋ ಸ್ಥಾಪನೆ ಮಾಡಿದಂತೆಯೇ ಈಗ, ರಕ್ಷಣಾ ವಲಯದ ಉದ್ದೇಶಕ್ಕಾಗಿ ವಿಶೇಷ ಬಾಹ್ಯಾಕಾಶ ಏಜೆನ್ಸಿಯನ್ನು ಸ್ಥಾಪಿಸಲು ಸರಕಾರ ಮುಂದಾಗಿದೆ. ಇತ್ತೀಚೆಗಷ್ಟೇ ಶತ್ರು ದೇಶದ ಉಪಗ್ರಹಗಳನ್ನೂ ಉಡಾಯಿಸುವ ಸಾಮರ್ಥ್ಯ ಪ್ರದರ್ಶನ ಮಾಡಿದ ಭಾರತ ಈಗ ಮತ್ತೂಂದು ಹೆಜ್ಜೆ ಮುಂದಿಟ್ಟು ರಕ್ಷಣಾ ಬಾಹ್ಯಾಕಾಶ ಏಜೆನ್ಸಿಯನ್ನು ಸ್ಥಾಪಿಸಲಿದೆ.

ಇಸ್ರೋ ರೀತಿಯಲ್ಲೇ ಇದರ ಕೇಂದ್ರವೂ ಬೆಂಗಳೂರಿನಲ್ಲೇ ಇರಲಿದ್ದು, ಹಿರಿಯ ಯುದ್ಧ ವಿಮಾನ ಪೈಲಟ್‌ ಏರ್‌ ವೈಸ್‌ ಮಾರ್ಷಲ್‌ ಎಸ್‌.ಪಿ. ಧರ್ಕಾರ್‌ ಇದರ ಮುಖ್ಯಸ್ಥರಾಗುವ ಸಾಧ್ಯತೆಯಿದೆ. ಸದ್ಯ ಧರ್ಕಾರ್‌ ವಾಯುಗಡಿ ರಕ್ಷಣಾ ಕಾರ್ಯನಿರ್ವಹಣೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.

ಮೂಲಗಳ ಪ್ರಕಾರ ಮುಂದಿನ ತಿಂಗಳಿನಿಂದಲೇ ಈ ಏಜೆನ್ಸಿ ಕೆಲಸ ಮಾಡಲಿದೆ. ಮೂರೂ ಸೇನಾಪಡೆಗಳಿಗೆ ಸಂಬಂಧಿಸಿದ ಎಲ್ಲ ಬಾಹ್ಯಾಕಾಶ ಸ್ವತ್ತುಗಳನ್ನೂ ಇದು ನಿರ್ವಹಿಸಲಿದೆ. ಅಷ್ಟೇ ಅಲ್ಲ, ಇತ್ತೀಚೆಗಷ್ಟೇ ಮಿಷನ್‌ ಶಕ್ತಿ ಅಡಿಯಲ್ಲಿ ಪ್ರಯೋಗಿಸಿದ ಎ-ಸ್ಯಾಟ್‌ ಸಾಮರ್ಥ್ಯದ ಬಳಕೆಯೂ ಈ ಏಜೆನ್ಸಿಯ ಕೈಯಲ್ಲಿರಲಿದೆ. ಆದರೆ ಯಾವ್ಯಾವ ಅಧಿಕಾರಗಳನ್ನು ಈ ಏಜೆನ್ಸಿಗೆ ನೀಡಬೇಕು ಮತ್ತು ಇದು ಎಷ್ಟು ವ್ಯಾಪ್ತಿಯನ್ನು ಹೊಂದಿರುತ್ತದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಇಸ್ರೋ ಕೇಂದ್ರ ಕಚೇರಿ ಇರುವುದರಿಂದ ಇಸ್ರೋದೊಂದಿಗೆ ಸಹಭಾಗಿತ್ವದಲ್ಲಿ ರಕ್ಷಣಾ ಬಾಹ್ಯಾಕಾಶ ಏಜೆನ್ಸಿ ನಿರ್ವಹಣೆ ಸುಲಭವಾಗಿರಲಿದೆ.

ಇನ್ನೊಂದೆಡೆ ಮೂರೂ ಪಡೆಗಳ ವಿಶೇಷ ಕಾರ್ಯನಿರ್ವಹಣೆ ವಿಭಾಗಕ್ಕೆ ಮೇಜರ್‌ ಜನರಲ್‌ ಎ.ಕೆ.ಧಿಂಗ್ರಾ ಅವರನ್ನು ನೇಮಿಸಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಮೂರೂ ಪಡೆಗಳ ಕಮಾಂಡೋಗಳನ್ನು ಒಳಗೊಂಡ ವಿಶೇಷ ವಿಭಾಗವನ್ನು ಸ್ಥಾಪಿಸಲಾಗಿದೆ. ಜತೆಗೆ ರಕ್ಷಣಾ ಸೈಬರ್‌ ಏಜೆನ್ಸಿಯನ್ನೂ ದಿಲ್ಲಿಯಲ್ಲಿ ಸ್ಥಾಪಿಸಲಾಗಿದ್ದು, ಇದಕ್ಕೆ ರಿಯರ್‌ ಅಡ್ಮಿರಲ್‌ ಮೋಹಿತ್‌ ಗುಪ್ತಾ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಇದು ಕೂಡ ಮೂರೂ ಪಡೆಗಳಿಗೆ ಸೇವೆ ಸಲ್ಲಿಸಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ