ದಿಲ್ಲಿ ವಾಯುಮಾಲಿನ್ಯದ ಖಳನಾಯಕ ಪತ್ತೆ

Team Udayavani, Dec 2, 2017, 7:15 AM IST

ಹೊಸದಿಲ್ಲಿ: ದಿಲ್ಲಿಯ ವಾಯು ಮಾಲಿನ್ಯವು ವಿಷಮ ಸ್ಥಿತಿಗೇರಲು ಅಮೆರಿಕದಿಂದ ಅಗಾಧ ಪ್ರಮಾಣದಲ್ಲಿ ಆಮದಾಗುತ್ತಿರುವ  “ಪೆಟ್‌ಕೋಕ್‌’ (ಪೆಟ್ರೋಲ್‌ ಕೋಕ್‌) ಎಂಬ ತೈಲ ತ್ಯಾಜ್ಯವೇ ಕಾರಣ ಎಂಬ ಆಘಾತಕಾರಿ ವಿಚಾರ “ಅಸೋಸಿಯೇಟೆಡ್‌ ಪ್ರಸ್‌’ ಸುದ್ದಿ ಸಂಸ್ಥೆ ನಡೆಸಿರುವ ತನಿಖೆಯಲ್ಲಿ ಬಹಿರಂಗವಾಗಿದೆ. 

ಕೆನಡಿಯನ್‌ ಟಾರ್‌ ಸ್ಯಾಂಡ್ಸ್‌ ಮತ್ತಿತರ ಕಚ್ಚಾ ತೈಲಗಳನ್ನು ಶುದ್ಧೀಕರಿಸುವಾಗ ತಳದಲ್ಲಿ ಸಂಗ್ರಹವಾಗುವ ಪದಾರ್ಥವಿದು. ಇದು ಸಾಮಾನ್ಯವಾಗಿ ಭೂಮಿಯ ಒಡಲಿನಿಂದ ಸಿಗುವ ಕಲ್ಲಿದ್ದಲಿಗಿಂತ ಬಹುಪಾಲು ಅಗ್ಗ. ಹಾಗಾಗಿ, ಇದನ್ನು “ಶಾಖೋತ್ಪನ್ನ ವಿದ್ಯುತ್‌ ಕೇಂದ್ರ’ಗಳಲ್ಲಿ ಕಲ್ಲಿದ್ದಲಿಗೆ ಪರ್ಯಾಯವಾಗಿ ಉಪಯೋಗಿಸುತ್ತಾರೆ. 

ವಿಶ್ವದಲ್ಲಿ ಅತಿ ಹೆಚ್ಚಿನ ಮಟ್ಟದಲ್ಲಿ ಈ ಪೆಟ್‌ಕೋಕ್‌ ತಯಾರಿಸುವ ಅಮೆರಿಕ, ಶಾಖೋ ತ್ಪನ್ನ ವಿದ್ಯುತ್‌ ಸ್ಥಾವರಗಳನ್ನು ಹೆಚ್ಚಾಗಿ ಹೊಂದಿರುವ ದೇಶಗಳು, ಅದರಲ್ಲೂ ವಿಶೇಷವಾಗಿ ಭಾರತಕ್ಕೆ ಇದನ್ನು ಹೆಚ್ಚಾಗಿ ರಫ್ತು ಮಾಡುತ್ತಿದೆ. 

ದುಷ್ಪರಿಣಾಮಗಳು: ಶಾಖೋತ್ಪನ್ನ ಕೇಂದ್ರಗಳಲ್ಲಿ ಇದನ್ನು ಕಾಯಿಸಿದಾಗ ಇದು ಅತ್ಯಧಿಕ ಇಂಗಾಲವನ್ನು  ಹಾಗೂ ಶ್ವಾಸಕೋಶಗಳನ್ನು ಜಖಂಗೊಳಿಸುವ ಅಧಿಕ ಪ್ರಮಾಣದ ಗಂಧಕವನ್ನು ಹೊರಸೂಸುತ್ತದೆ.  ಪರಿಸರ ಇಲಾಖೆ ನಿಗದಿಗೊಳಿಸಿರುವ ಗಂಧಕದ ಮಿತಿಗಿಂತ 17 ಪಟ್ಟು ಹೆಚ್ಚು ಗಂಧಕವನ್ನು ಇದು ಹೊರಹಾಕುತ್ತದಲ್ಲದೆ, ಡೀಸೆಲ್‌ ಹೊರಸೂಸುವ ಗಂಧಕಕ್ಕಿಂತ 1,380 ಪಟ್ಟು ಹೆಚ್ಚು ಗಂಧಕವನ್ನು ಇದು ಹೊರಸೂಸುತ್ತದೆ ಎಂದು ಕೆಲ ಪ್ರಯೋಗಾಲಯದ ವರದಿಗಳು ತಿಳಿಸಿವೆ. 

ಇಂಥ ಕೆಟ್ಟ ಕಚ್ಚಾ ವಸ್ತುವನ್ನು ಅಮೆರಿಕದಿಂದ 2016ರಲ್ಲಿ 8 ಮಿಲಿಯನ್‌ ಮೆಟ್ರಿಕ್‌ ಟನ್‌ಗಳಷ್ಟು ಪೆಟ್‌ಕೋಕ್‌ ಅನ್ನು ಭಾರತ ಆಮದು ಮಾಡಿಕೊಂಡಿದೆ ಎಂಬ ಆಘಾತಕಾರಿ ವಿಚಾರವನ್ನೂ ತನಿಖಾ ವರದಿ ಬಯಲಿಗೆಳೆದಿದೆ.

ಅಮೆರಿಕದ ತ್ಯಾಜ್ಯಕ್ಕೆ ಭಾರತ ಡಸ್ಟ್‌ಬಿನ್‌ ಆಗುವ ಅಗತ್ಯವಿಲ್ಲ. ತಕ್ಷಣವೇ ಈ ವಿನಾಶಕಾರಿ ತ್ಯಾಜ್ಯ ಆಮದು ನಿಲ್ಲಿಸುವ ಅವಶ್ಯಕತೆಯಿದೆ. 
– ಸುನೀತಾ ನಾರಾಯಣ್‌, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯೆ

ದಿಲ್ಲಿಯ ಮಾಲಿನ್ಯ ನನ್ನ ಶ್ವಾಸಕೋಶಗಳನ್ನು ಬಲಿಪಡೆದಿದೆ. ಆಸ್ತಮಾ ಇನ್ಹೆàಲರ್‌ನಿಂದ ಬದುಕು ಸಾಗಿಸುವಂತಾಗಿದೆ. 
– ಸತ್ಯೇ ಬಿರ್‌, ದಿಲ್ಲಿಯ ಹಿರಿಯ ನಾಗರಿಕ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ