ಹೊಸ ಡ್ರೈವಿಂಗ್ ಲೈಸನ್ಸ್, ನವೀಕರಣಕ್ಕೆ ಶೀಘ್ರ ಆಧಾರ್ ಕಡ್ಡಾಯ
Team Udayavani, Sep 15, 2017, 7:19 PM IST
ಹೊಸದಿಲ್ಲಿ : ಹೊಸದಾಗಿ ಡ್ರೈವಿಂಗ್ ಲೈಸನ್ಸ್ ಪಡೆಯುವುದಕ್ಕೆ ಮತ್ತು ಈಗಾಗಲೇ ಪಡೆದಿರುವ ಡ್ರೈವಿಂಗ್ ಲೈಸನ್ಸ್ ನವೀಕರಿಸುವುದಕ್ಕೆ ಆಧಾರ್ ನಂಬರ್ ಜೋಡಣೆಯನ್ನು ಶೀಘ್ರವೇ ಕಡ್ಡಾಯ ಮಾಡಲಾಗುವುದು ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ.
2017ರ ಡಿಜಿಟಲ್ ಹರಿಯಾಣ ಶೃಂಗದಲ್ಲಿ ಮಾತನಾಡುತ್ತಿದ್ದ ಅವರು, ಈ ಕುರಿತಾಗಿ ತಾನು ಈಗಾಗಲೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು.
ಡ್ರೈವಿಂಗ್ ಲೈಸನ್ಸ್ಗೆ ಆಧಾರ್ ಕಾರ್ಡ್ ಜೋಡಣೆಯನ್ನು ಕಡ್ಡಾಯ ಮಾಡುವ ಮೂಲಕ ಸರಕಾರಕ್ಕೆ ಕೇಂದ್ರಿಕೃತ “ಸಾರಥಿ’ ಡಾಟಾ ಬೇಸ್ ನಿರ್ವಹಿಸುವುದಕ್ಕೆ ಅನುಕೂಲವಾಗಲಿದೆ. ಇದರಿಂದ ದೇಶಾದ್ಯಂತದ ಆರ್ಟಿಓ ಗಳು ಕೇಂದ್ರೀಕೃತ ಡಾಟಾ ಬೇಸ್ಗೆ ಲಾಗ್ ಆನ್ ಆಗುವ ಮೂಲಕ ಡ್ರೈವಿಂಗ್ ಲೈಸನ್ಸ್ಗೆ ಅರ್ಜಿ ಸಲ್ಲಿಸಿರುವ ವ್ಯಕ್ತಿಯು ದೇಶದ ಬೇರೆ ಯಾವುದೇ ಭಾಗದಲ್ಲಿ ಈಗಾಗಲೇ ಲೈಸನ್ಸ್ ಹೊಂದಿದ್ದಾನೆಯೇ ಇಲ್ಲವೇ ಎಂಬುದನ್ನು ತತ್ಕ್ಷಣ ಖಾತರಿ ಪಡಸಿಕೊಳ್ಳಬಹುದಾಗಿದೆ.
ನ್ಯಾಶನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ – ಎನ್ಐಸಿ – ಈಗಾಗಲೇ ದೇಶಾದ್ಯಂತದ ಆರ್ಟಿಓ ಗಳಲ್ಲಿ ಲಭ್ಯವಿರುವ ಎಲ್ಲ ಅಂಕಿ ಅಂಶಗಳನ್ನು ಕಾಮನ್ ಡಾಟಾಬೇಸ್ಗೆ ಅಪ್ಲೋಡ್ ಮಾಡಿದೆ.