ಮಾಯಾ, ಯೋಗಿ, ಅಜಂ ಬಾಯಿಗೆ ಬೀಗ

ಸುಪ್ರೀಂ ಕೋರ್ಟ್‌ ಗರಂ ಆದ ಬೆನ್ನಲ್ಲೇ ಈ ಆದೇಶ

Team Udayavani, Apr 16, 2019, 6:00 AM IST

ಹೊಸದಿಲ್ಲಿ: ದ್ವೇಷ ಹುಟ್ಟಿಸುವ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಬಿಎಸ್‌ಪಿ ನಾಯಕಿ ಮಾಯಾವತಿ, ಎಸ್‌ಪಿ ನಾಯಕ ಅಜಂ ಖಾನ್‌ ಮತ್ತು ಬಿಜೆಪಿ ನಾಯಕಿ ಮನೇಕಾ ಗಾಂಧಿ ಅವರಿಗೆ ಕೇಂದ್ರ ಚುನಾವಣ ಆಯೋಗ ನಿರ್ಬಂಧ ಹೇರಿದೆ.

ಯೋಗಿ ಆದಿತ್ಯನಾಥ್‌ ಮತ್ತು ಅಜಂ ಖಾನ್‌ ಅವರಿಗೆ ಮೂರು ದಿನ ಯಾವುದೇ ಪ್ರಚಾರ ನಡೆಸದಂತೆ, ಮಾಯಾವತಿ, ಮನೇಕಾ ಅವರಿಗೆ ಎರಡು ದಿನ ಪ್ರಚಾರ ನಡೆಸದಂತೆ ಬಾಯಿಗೆ ಬೀಗ ಹಾಕಿದೆ. ದ್ವೇಷದ ಭಾಷಣ ಮಾಡಿದವರ ಬಗ್ಗೆ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಚುನಾವಣ ಆಯೋಗವನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಕೇಂದ್ರ ಚುನಾವಣ ಆಯೋಗದ ಆದೇಶ ಮಂಗಳವಾರ ಬೆಳಗ್ಗೆ 6ರಿಂದಲೇ ಅನ್ವಯ ವಾಗಲಿದೆ. ಹೀಗಾಗಿಯೇ ಇವರಿಬ್ಬರು ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರದ ಕಡೇ ದಿನವಾದ ಮಂಗಳವಾರ ಪ್ರಚಾರ ನಡೆಸದಂತೆ ನಿರ್ಬಂಧ ಹೇರಿದಂತಾಗಿದೆ.

ಯೋಗಿ ಅವರ “ಅಲಿ-ಬಜರಂಗಬಲಿ’ ಹೇಳಿಕೆ ಮತ್ತು ಮಾಯಾ ಅವರ, “ಮುಸ್ಲಿಮರು ಬೇರೆ ಯವರಿಗೆ ಮತ ಹಾಕಿ ಮತ ವಿಭಜನೆ ಮಾಡಬೇಡಿ’ ಎಂಬ ಹೇಳಿಕೆಗೆ ಸಂಬಂಧಿಸಿ ಈ ನಿರ್ಬಂಧ ಹೇರಲಾಗಿದೆ. ಅಜಂ ಖಾನ್‌ ಅವರು ಬಿಜೆಪಿ ಅಭ್ಯರ್ಥಿ ಜಯಪ್ರದಾ ವಿರುದ್ಧ ಅವಹೇಳನಕಾರಿ ಪದ ಪ್ರಯೋಗ ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮನೇಕಾ ಗಾಂಧಿ, ಉದ್ಯೋಗ ಬೇಕೆಂದಾದರೆ ಮುಸ್ಲಿಮರು ನನಗೆ ಮತ ಹಾಕಬೇಕು ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದರು. ಈ ಹೇಳಿಕೆ ಆಧರಿಸಿ ಮನೇಕಾಗೂ ಪ್ರಚಾರಕ್ಕೆ ನಿರ್ಬಂಧ ಹೇರಲಾಗಿದೆ. ಈ ನಾಯಕರು ಪ್ರಭಾವಿಗಳಾಗಿದ್ದು, ದ್ವೇಷದ ಹೇಳಿಕೆ ನೀಡಿರು ವುದು ಸಾಬೀತಾಗಿದೆ ಎಂದು ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

ಆಯೋಗದ ವಿರುದ್ಧ ಸುಪ್ರೀಂ ಗರಂ
ಚುನಾವಣೆ ಪ್ರಚಾರದಲ್ಲಿ ತೊಡಗಿರುವ ಅನೇಕ ಮಂದಿ ದ್ವೇಷದ ಭಾಷಣ ಮಾಡು ತ್ತಿದ್ದರೂ ನೀವೇನು ಕ್ರಮ ಕೈಗೊಂಡಿದ್ದೀರಿ? ನೀವೇನು ನಿದ್ರೆ ಮಾಡುತ್ತಿದ್ದೀರಾ? ಎಷ್ಟು ಮಂದಿಗೆ ನೋಟಿಸ್‌ ಜಾರಿ ಮಾಡಿದ್ದೀರಿ ಹೇಳಿ ಎಂದು ಕೇಂದ್ರ ಚುನಾವಣ ಆಯೋಗವನ್ನು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ