ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ: 8 ಮಂದಿ ದಾರುಣ ಸಾವು
Team Udayavani, Jun 10, 2017, 11:35 AM IST
ಜಗತ್‌ಸಿಂಗ್‌ಪುರ, ಒಡಿಶಾ : ಇಂದು ಬೆಳಗ್ಗೆ ಆಟೋ ರಿಕ್ಷಾ ಗೆ ಟ್ರಕ್ ಢಿಕ್ಕಿಯಾದ ಭೀಕರ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಈ ಜಿಲ್ಲೆಯಲ್ಲಿ ನಡೆದಿದೆ.
ಈ ಅವಘಡವು ಇಲ್ಲಿಗೆ ಸಮೀಪದ ಚಾಂದೋಲ್ ಎಂಬಲ್ಲಿ ನಡೆದಿದೆ. ನೇಮಾಲದಲ್ಲಿ ಸ್ನಾನ ಪೂರ್ಣಿಮಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನತದೃಷ್ಟರು ತಮ್ಮ ಊರಾದ ಮಚ್ಚಗಾಂವ್‌ಗೆ ಮರಳುತ್ತಿದ್ದರು.
ಹದಿ ಹರೆಯದ ಒಬ್ಟಾತ ಸೇರಿದಂತೆ ಒಟ್ಟು ಏಳು ಮಂದಿ ಸ್ಥಳದಲ್ಲೇ ಮೃತಪಟ್ಟರು. ಇನ್ನೋರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಎಂದು ಪೊಲೀಸರು ತಿಳಿಸಿದ್ದಾರೆ.
ಇತರ ಗಾಯಾಳುಗಳನ್ನು ಮೊದಲು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿ ಬಳಿಕ ಅಲ್ಲಿಂದ ಕಟಕ್‌ನಲ್ಲಿನ ಎಸ್‌ಸಿಬಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಒಯ್ಯಲಾಯಿತು. ಈ ಗಾಯಾಳುಗಳ ಪರಿಸ್ಥಿತಿ ಗಂಭೀರವಿದೆ ಎಂದು ಗೊತ್ತಾಗಿದೆ.
ಅಪಘಾತದ ಬಳಿಕ ಟ್ರಕ್ ಚಾಲಕನು ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. ಈ ಅಪಘಾತದಲ್ಲಿ ಮಡಿದವರಿಗೆ ಮತ್ತು ಗಾಯಾಳುಗಳಿಗೆ ಸೂಕ್ತ ಮೊತ್ತದ ಪರಿಹಾರ ನೀಡುವಂತೆ ಆಗ್ರಹಿಸಿ ಸ್ಥಳೀಯರು ಚಾಂದೋಲ ಸಮೀಪದ ಜಗತ್‌ಸಿಂಗ್‌ಪುರ – ಮಚ್ಚಗಾಂವ್ ರಸ್ತೆ ತಡೆ ನಡೆಸಿದರು. ಪರಿಣಾಮವಾಗಿ ವಾಹನ ಸಂಚಾರ ತೀವ್ರವಾಗಿ ಬಾಧಿತವಾಯಿತು. ಪ್ರತಿಭಟನಕಾರರು ಟ್ರಕ್ ಚಾಲಕನ ತ್ವರಿತ ಬಂಧನವನ್ನು ಆಗ್ರಹಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿದೆ.