ಒಂದೋ ನಾನು ಜೀವಂತವಾಗಿರಬೇಕು ಇಲ್ಲವೇ ಉಗ್ರರು : ಗುಜರಾತ್‌ನಲ್ಲಿ ಮೋದಿ

ಪಾಕ್‌ ಹಾಗೆ ಮಾಡದೇ ಇದ್ದಲ್ಲಿ ಆ ದಿನ ರಾತ್ರಿ ಅವರ ಪಾಲಿಗೆ ‘ಕರಾಳ ರಾತ್ರಿ’ ಆಗಿರುತ್ತಿತ್ತು...

Team Udayavani, Apr 21, 2019, 3:24 PM IST

ಪಠಾಣ್‌: ಎಪ್ರಿಲ್‌ 23ರಂದು ಮೂರನೇ ಹಂತದ ಚುನಾವಣೆ ನಡೆಯಲಿರುವ ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ರಾಷ್ಟ್ರೀಯ ಸುರಕ್ಷತೆಯ ವಿಷಯವನ್ನೇ ಪ್ರಮುಖವಾಗಿ ಪ್ರಸ್ತಾಪಿಸುತ್ತಿರುವ ಪ್ರದಾನಿ ಮೋದಿ ಅವರು ಅಭಿನಂದನ್‌ ವರ್ತಮಾನ್‌ ಅವರ ಬಿಡುಗಡೆಗೆ ತಾನು ಪಾಕಿಸ್ಥಾನಕ್ಕೆ ಗಡುವು ನೀಡಿದ್ದೆ ಎಂಬ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಒಂದು ವೇಳೆ ಅಭಿನಂದನ್‌ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಒಪ್ಪಿಸದೇ ಇದ್ದರೆ ಅದರ ಪರಿಣಾಮಗಳನ್ನು ಎದರುರಿಸಬೇಕಾದೀತು ಎಂದು ಪಾಕಿಸ್ಥಾನಕ್ಕೆ ನಾನು ಖಡಕ್‌ ಎಚ್ಚರಿಕೆಯನ್ನು ನೀಡಿದ್ದೆ ಎಂಬ ವಿಷಯವನ್ನು ಅವರು ಇಂದಿನ ಪ್ರಚಾರ ಸಭೆಯಲ್ಲಿ ಬಹಿರಂಗಗೊಳಿಸಿದ್ದಾರೆ.

ಅಭಿನಂದನ್‌ ವರ್ತಮಾನ್‌ ಅವರು ಪಾಕಿಸ್ಥಾನದ ವಶಕ್ಕೆ ಸಿಲುಕಿದ ವಿಷಯ ಬಹಿರಂಗವಾಗುತ್ತಿದ್ದಂತೆ ನಮ್ಮ ವಿರೋಧ ಪಕ್ಷಗಳು ಸರಕಾರದ ಪ್ರತಿಕ್ರಿಯೆ ಕೇಳಿದವು ಆ ಸಂದರ್ಭದಲ್ಲಿ ನಾವು ಪತ್ರಿಕಾಗೋಷ್ಠಿಯೊಂದನ್ನು ನಡೆಸಿದೆವು. ಮತ್ತು ಆ ಪತ್ರಿಕಾಗೋಷ್ಠಿಯ ಮೂಲಕ ಪಾಕಿಸ್ಥಾನಕ್ಕೆ ಖಡಕ್‌ ಎಚ್ಚರಿಕೆಯನ್ನು ನೀಡಿದೆವು. ‘ಒಂದು ವೇಳೆ ನಮ್ಮ ಪೈಲಟ್‌ಗೆ ಏನಾದರೂ ತೊಂದರೆಯಾದಲ್ಲಿ ಆ ನಂತರ ನಿಮ್ಮ ಪರಿಸ್ಥಿತಿ ಹೇಗಿರುತ್ತದೆ ಎಂದರೆ ‘ನಮ್ಮ ಈ ಸ್ಥಿತಿಗೆ ಮೋದಿ ಕಾರಣ’ ಎಂದು ನೀವು ಹೇಳುತ್ತಿರಬೇಕಾಗುತ್ತದೆ ಎಂದು ಪ್ರಧಾನಿ ಹೇಳಿದರು.

‘ನರೇಂದ್ರ ಮೋದಿ ಅವರು 12 ಕ್ಷಿಪಣಿಗಳನ್ನು ಸಿದ್ಧವಾಗಿರಿಸಿಕೊಂಡಿದ್ದಾರೆ ಮತ್ತು ಯಾವುದೇ ಸಂದರ್ಭದಲ್ಲಿ ಪಾಕಿಸ್ಥಾನದ ಮೇಲೆ ದಾಳಿ ನಡೆಯಬಹುದು, ಪರಿಸ್ಥಿತಿ ತೀರಾ ವಿಕೋಪಕ್ಕೆ ಹೋಗಿದೆ’ ಎಂದು ಅಮೆರಿಕಾದ ಅಧಿಕಾರಿಯೊಬ್ಬರು ಅಭಿನಂದನ್‌ ಸೆರೆಯಾದ ಎರಡನೇ ದಿನ ಹೇಳಿಕೊಂಡಿದ್ದರು ಮತ್ತು ಅದೇ ದಿನ ಪಾಕಿಸ್ಥಾನ ಅಭಿನಂದನ್‌ ಅವರನ್ನು ಬಿಡುಗಡೆ ಮಾಡಿತ್ತು. ಪಾಕ್‌ ಹಾಗೆ ಮಾಡದೇ ಇದ್ದಲ್ಲಿ ಆ ದಿನ ರಾತ್ರಿ ಅವರ ಪಾಲಿಗೆ ‘ಕರಾಳ ರಾತ್ರಿ’ ಆಗಿರುತ್ತಿತ್ತು ಎಂದವರು ಹೇಳಿದರು.

ಇದನ್ನೆಲ್ಲಾ ಅಮೆರಿಕಾವೇ ಹೇಳಿದೆ. ಈ ವಿಚಾರದಲ್ಲಿ ನಾನು ಈಗ ಏನನ್ನೂ ಹೇಳುವುದಿಲ್ಲ, ಸಮಯ ಬಂದಾಗ ಎಲ್ಲವನ್ನೂ ತಿಳಿಸುತ್ತೇನೆ ಎಂದವರು ಹೇಳಿದರು. ಪ್ರಧಾನ ಮಂತ್ರಿ ಕುರ್ಚಿ ಉಳಿಯುತ್ತದೋ ಇಲ್ಲವೋ, ಆದರೆ ಒಂದೋ ನಾನು ಜೀವಂತವಾಗಿರಬೇಕು ಅಥವಾ ಉಗ್ರರು ಜೀವಂತವಿರಬೇಕು ಎಂದು ನಾನು ನಿರ್ಧರಿಸಿಯಾಗಿದೆ ಎಂದು ಮೋದಿ ಹೇಳಿದರು.

ಗುಜರಾತ್‌ನ ಎಲ್ಲಾ 26 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಪ್ರಧಾನಿ ಮೋದಿ ತನ್ನ ತವರು ರಾಜ್ಯದ ಮತದಾರರಲ್ಲಿ ಮನವಿ ಮಾಡಿಕೊಂಡರು. ಈ ಮಣ್ಣಿನ ಮಗನ ಕಾಳಜಿ ವಹಿಸುವುದು ನಿಮ್ಮೆಲ್ಲರ ಕರ್ತವ್ಯ, ಇಲ್ಲಿನ 26 ಕ್ಷೇತ್ರಗಳಲ್ಲೂ ನನಗೆ ಜಯನೀಡಿ ಎಂದು ಅವರು ಭಾವನಾತ್ಮಕವಾಗಿ ನುಡಿದರು.

ಕೇಂದ್ರದಲ್ಲಿ ಮತ್ತೆ ನಮ್ಮ ಸರಕಾರ ಅಧಿಕಾರಕ್ಕೇರುವುದು ಶತಸಿದ್ಧ. ಆದರೆ ಇಲ್ಲಿ ನಾವು 26 ಸೀಟುಗಳನ್ನು ಗೆಲ್ಲಲಿಲ್ಲ ಎಂದಾದರೆ ಮತ್ತೆ ಈ ವಿಷಯೇ ಟಿ.ವಿ. ಚರ್ಚೆಗಳ ಪ್ರಧಾನ ವಿಷಯವಾಗಿರುತ್ತದೆ ಎಂದವರು ವ್ಯಂಗ್ಯಭರಿತ ದಾಟಿಯಲ್ಲಿ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ