ದಿಲ್ಲಿ ವಿಮಾನ ನಿಲ್ದಾಣ ಮಹಿಳಾ ಸಿಬಂದಿಯಿಂದ ವಿದೇಶೀಯಳ ಮೇಲೆ ಹಲ್ಲೆ ?
Team Udayavani, Aug 30, 2018, 7:10 PM IST
ಹೊಸದಿಲ್ಲಿ : ದಿಲ್ಲಿ ವಿಮಾನ ನಿಲ್ದಾಣದ ಮಹಿಳಾ ಉದ್ಯೋಗಿಯೊಬ್ಬರು ನಿನ್ನೆ ಬುಧವಾರ 1ಡಿ ಟರ್ಮಿನಲ್ನಲ್ಲಿ ವಿದೇಶಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದರೆಂಬ ಘಟನೆ ವರದಿಯಾಗಿದೆ.
ಘಟನೆಯ ಬಗ್ಗೆ ವರದಿ ಮಾಡಿರುವ ಡಿಎನ್ಎ, ವಿದೇಶಿ ಮಹಿಳೆಯು ತನ್ನ ಸ್ನೇಹಿತನ ಜತೆಗೆ ಭಾರತ ಪ್ರವಾಸಕ್ಕೆಂದು ಬಂದಿದ್ದಳು; ಇಲ್ಲಿನ ವಿಮಾನ ನಿಲ್ದಾಣದ ಏರಿಂಡಿಯಾ ಸಿಂಗಾಪುರ ಏರ್ ಪೋರ್ಟ್ ಟರ್ಮಿನಲ್ ಸರ್ವಿಸಸ್ ನ ಟಿಕೆಟ್ ಕೌಂಟರ್ನಲ್ಲಿ ಇದ್ದ ಮಹಿಳಾ ಉದ್ಯೋಗಿಯೊಂದಿಗೆ ಟಿಕೆಟ್ ದರಕ್ಕೆ ಸಂಬಂಧ ಪಟ್ಟು ಜಗಳ ತೆಗೆದಳು.
ಕೌಂಟರ್ನಲ್ಲಿದ್ದ ಮಹಿಳಾ ಉದ್ಯೋಗಿ ಸಿಟ್ಟಿನಲ್ಲೇ ವಿದೇಶಿ ಮಹಿಳೆಗೆ ಉತ್ತರಿಸಿದಾಗ ಆಕೆ ತನ್ನ ಮೊಬೈಲ್ನಲ್ಲಿ ಕೌಂಟರ್ ಮಹಿಳೆಯ ಫೋಟೋ ಕ್ಲಿಕ್ಕಿಸಿದಳು. ಇದರಿಂದ ಇನ್ನೂ ಸಿಟ್ಟಿಗೆದ್ದ ಕೌಂಟರ್ ಮಹಿಳೆ ವಿದೇಶಿಗಳ ಮೇಲೆ ಹಲ್ಲೆ ನಡೆಸಿದಳು ಎನ್ನಲಾಗಿದೆ.
ಈ ಘಟನೆಯ ಬಗ್ಗೆ ಈಗ ತನಿಖೆ ನಡೆಯುತ್ತಿದ್ದು ಸದ್ಯಕ್ಕೆ ಕೌಂಟರ್ ಉದ್ಯೋಗಿ ಮಹಿಳೆಯನ್ನು ಅಮಾನತಿನಲ್ಲಿ ಇರಿಸಲಾಗಿದೆ. ವಿದೇಶಿ ಮಹಿಳೆಯು ಯಾವ ದೇಶದವಳೆಂದು ಗೊತ್ತಾಗಿಲ್ಲ.