ಫೆ.8ರ ದಿಲ್ಲಿ ಚುನಾವಣೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹೋರಾಟ; ಕಪಿಲ್ ಮಿಶ್ರಾ ಟ್ವೀಟ್
ದಿಲ್ಲಿಯ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ವಿರುದ್ಧ ವಾಗ್ದಾಳಿ
Team Udayavani, Jan 23, 2020, 3:44 PM IST
ನವದೆಹಲಿ: ದೇಶದ ರಾಜಧಾನಿಯಲ್ಲಿ ಫೆಬ್ರುವರಿ 8ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹೋರಾಟವಾಗಿದೆ ಎಂದು ಭಾರತೀಯ ಜನತಾ ಪಕ್ಷದ ಮೊಡೆಲ್ ಟೌನ್ ಕ್ಷೇತ್ರದ ಅಭ್ಯರ್ಥಿ ಕಪಿಲ್ ಮಿಶ್ರಾ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಫೆಬ್ರುವರಿ 8ರಂದು ದಿಲ್ಲಿಯ ಬೀದಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಹೋರಾಟ ನಡೆಯಲಿದೆ ಎಂದು ಮಿಶ್ರಾ ಟ್ವೀಟ್ ಮಾಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ, ದಿಲ್ಲಿಯ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದ ವಿರುದ್ಧ ವಾಗ್ದಾಳಿ ನಡೆಸಿರುವ ಮಿಶ್ರಾ, ಈಗಾಗಲೇ ಪಾಕಿಸ್ತಾನ ಶಾಹೀನ್ ಬಾಗ್ ಗೆ ಪ್ರವೇಶಿಸಿದೆ. ಅಷ್ಟೇ ಅಲ್ಲ ದಿಲ್ಲಿಯಲ್ಲಿ ಹಲವು ಸಣ್ಣ, ಸಣ್ಣ ಪಾಕಿಸ್ತಾನ ರಚನೆಯಾಗಿದೆ. ಶಾಹೀನ್ ಬಾಗ್, ಚಾಂದ್ ಬಾಗ್ ಮತ್ತು ಇಂದರ್ ಲೋಕ್ ಪ್ರದೇಶದಲ್ಲಿ ಭಾರತದ ಕಾನೂನನ್ನು ಪಾಲಿಸುತ್ತಿಲ್ಲ ಎಂದು ಮಿಶ್ರಾ ಆರೋಪಿಸಿದ್ದಾರೆ.
ಆಡಳಿತಾರೂಢ ಆಮ್ ಆದ್ಮಿ ಪಕ್ಷ ಬುಧವಾರ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಮೊಡೆಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಮಪತ್ರ ಸ್ವೀಕರಿಸಿರುವುದು ತಪ್ಪು. ಅಲ್ಲದೇ ನಾಮಪತ್ರವನ್ನು ರದ್ದುಪಡಿಸುವಂತೆ ಒತ್ತಾಯಿಸಿತ್ತು.