ಮೊದಲ ಹಂತದ ಮತ; ಗುಜರಾತ್‌ನಲ್ಲಿಂದು ಬಿಜೆಪಿ, ಕಾಂಗ್ರೆಸ್, ಆಪ್ ಸಮರ
Team Udayavani, Dec 1, 2022, 6:50 AM IST
ಅಹ್ಮದಾಬಾದ್: ಬಹು ನಿರೀಕ್ಷಿತ ಗುಜರಾತ್ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಗುರುವಾರ ನಡೆಯಲಿದೆ. ರಾಜ್ಯದ ದಕ್ಷಿಣ ಭಾಗ ಮತ್ತು ಸೌರಾಷ್ಟ್ರ-ಕಛ್ ನಾದ್ಯಂತ ಇರುವ 19 ಜಿಲ್ಲೆಗಳಲ್ಲಿ ಇರುವ 89 ಕ್ಷೇತ್ರಗಳಲ್ಲಿನ 2.3 ಕೋಟಿ ಮತದಾರರು 70 ಮಹಿಳೆಯರೂ ಸಹಿತ 788 ಮಂದಿ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. 2017ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 48, ಕಾಂಗ್ರೆಸ್ 40 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಒಬ್ಬ ಸ್ವತಂತ್ರ ಅಭ್ಯರ್ಥಿ ಜಯ ಸಾಧಿಸಿದ್ದರು.
ಪ್ರಸಕ್ತ ಸಾಲಿನ ಚುನಾವಣೆಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿಗೆ ಸವಾಲೊಡ್ಡುತ್ತಿದ್ದು, 88 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಮೊದಲ ಹಂತದ ಎಲ್ಲ 89 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿವೆ.
ಸೌರಾಷ್ಟ್ರ-ಕಛ್ ಪ್ರದೇಶದಲ್ಲಿ 54 ಕ್ಷೇತ್ರಗಳು ಇವೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಈ ಪ್ರದೇಶದಲ್ಲಿ 30 ಕ್ಷೇತ್ರಗಳಲ್ಲಿ ಗೆದ್ದಿತ್ತು. ಸೂರತ್ ಸಹಿತ ದಕ್ಷಿಣ ಗುಜರಾತ್‌ನಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು.
ಪ್ರಚಾರದಲ್ಲಿ ರಾಮ ಮಂದಿರ ಪ್ರಸ್ತಾವ
ಮೊದಲ ಹಂತದ ಮತದಾನ ಪ್ರಗತಿಯಲ್ಲಿ ಇರುವಂತೆ ಯೇ ಡಿ.5ರಂದು ನಡೆಯಲಿರುವ ಎರಡನೇ ಹಂತಕ್ಕಾಗಿ ಪ್ರಚಾರ ಬಿರುಸಾಗಿದೆ. ಈ ಬಾರಿಯ ಚುನಾವಣೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಹಿತ ಪ್ರಮುಖರು ಪ್ರಸ್ತಾವ ಮಾಡಿ ದ್ದಾರೆ. ಈ ಮೂಲಕ ವಾಗ್ಧಾನ ಮಾಡಿದ್ದನ್ನು ಬಿಜೆಪಿ ಪೂರೈಸುತ್ತದೆ ಎಂಬುದನ್ನು ಮುಖಂಡರು ಪ್ರತಿಪಾದಿಸುತ್ತಿದ್ದಾರೆ.
ಪ್ರಧಾನಿಗೆ ಶ್ಲಾಘನೆ: ದೇಶದ ಬುಡಕಟ್ಟು ಸಮುದಾಯ ದವರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೆಚ್ಚುಗೆ ಸೂಚಿಸಿದ್ದಾರೆ. ಮಹಿಸಾರ್ ಜಿಲ್ಲೆಯ ಕದನ ಗ್ರಾಮದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸಮುದಾಯ ಹೊಂದಿರುವ ಗೌರವವನ್ನು ಉಳಿಸುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಇದೇ ವೇಳೆ, ಅಹ್ಮದಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣ ಸಚಿವ ರಾಜನಾಥ್ ಸಿಂಗ್ “ದೇಶದ ರಾಜಕೀಯ ವಲಯದಲ್ಲಿ ಕಾಂಗ್ರೆಸ್ ಗರಿಷ್ಠ ಪ್ರಮಾಣದ ನಂಬಿಕೆಯ ಕೊರತೆಯನ್ನು ಸೃಷ್ಟಿಸಿತ್ತು’ ಎಂದು ದೂರಿದ್ದಾರೆ. ಕಾಂಗ್ರೆಸ್ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದರೆ, ಆಪ್ ತಾನೂ ಗುಜರಾತ್‌ನ ರಾಜಕೀಯದಲ್ಲಿ ಪ್ರಭಾವ ಬೀರುವ ಸಾಮರ್ಥ್ಯ ಇದೆ ಎಂದು ಬಿಂಬಿಸಲು ಮುಂದಾಗಿದೆ ಎಂದರು.