ಶರಣಾದವನಿಗೆ ಫುಟ್ಬಾಲ್ ತರಬೇತಿ: ಬೈಚುಂಗ್
Team Udayavani, Nov 19, 2017, 6:35 AM IST
ಹೊಸದಿಲ್ಲಿ: ಲಷ್ಕರ್ ಉಗ್ರ ಸಂಘಟನೆ ಸೇರಿದ್ದ ಕಾಶ್ಮೀರದ ಯುವಕ ತಾಯಿಯ ಕಣ್ಣೀರಿಗೆ ನೊಂದು ಶರಣಾದ ಕಥೆ ಭಾರತದ ಫುಟ್ಬಾಲ್ ತಂಡದ ಮಾಜಿ ಕ್ಯಾಪ್ಟನ್ ಬೈಚುಂಗ್ ಭುಟಿಯಾ ಅವರ ಮನ ಕರಗಿಸಿದೆ. ಫುಟ್ಬಾಲ್ ಆಟಗಾರನೂ ಆಗಿರುವ ಆ ಯುವಕ ಮಜೀದ್ ಖಾನ್‌ಗೆ ತಾವೇ ಫು ಟ್ಬಾಲ್ ತರಬೇತಿ ನೀಡಲು ಇದೀಗ ಬೈಚುಂಗ್ ಭುಟಿಯಾ ಮುಂದೆ ಬಂದಿದ್ದಾರೆ. ಈ ಕುರಿತು ಜಮ್ಮು- ಕಾಶ್ಮೀರ ಫುಟ್ಬಾಲ್ ಒಕ್ಕೂಟಕ್ಕೆ ಪತ್ರ ಬರೆದಿರುವ ಅವರು, ಮಜೀದ್‌ಗೆ ಅಗತ್ಯ ತರಬೇತಿ ನೀಡುವುದಾಗಿ ಹೇಳಿಕೊಂಡಿದ್ದಾರೆ.
ಮಜೀದ್ ಕಥೆ ಕೇಳಿ ಬಹಳ ಬೇಸರವಾಯಿತು. ಫುಟ್ಬಾಲ್ ಎನ್ನುವುದು ಸಾವಿರಾರು ಮಂದಿಗೆ ಬದುಕನ್ನು ಕಲ್ಪಿಸಿದೆ. ಈ ಸುಂದರ ಆಟವನ್ನು ಆಡಲು ಉತ್ತಮ ವೇದಿಕೆ ಅಗತ್ಯವಿದೆ. ಹಾಗಾಗಿ, ಮಜೀದ್ ಖಾನ್‌ಗೆ ತರಬೇತಿ ನೀಡಿ, ಅವನು ಮತ್ತೆ ಫುಟ್ಬಾಲ್ ಆಡುವಂತೆ ಮಾಡುತ್ತೇನೆ. ಅವನಿಗೆ ಅಂಥದ್ದೊಂದು ಅವಕಾಶ ಬೇಕು. ಅಂಥ ಬಾಗಿಲನ್ನು ನಾವೇ ತೆರೆಯಬೇಕು ಎಂದು ಭುಟಿಯಾ ಅವರು ಪತ್ರದಲ್ಲಿ ಹೇಳಿರುವುದಾಗಿ ಅಖೀಲ ಭಾರತ ಫುಟ್ಬಾಲ್ ಒಕ್ಕೂಟ ತಿಳಿಸಿದೆ.