ಪಕ್ಷ, ವಿಪಕ್ಷ, ನಿಷ್ಪಕ್ಷ ಮರೆತು ದೇಶದ ಅಭಿವೃದ್ಧಿಗೆ ಶ್ರಮಿಸೋಣ: ವಿಪಕ್ಷಕ್ಕೆ ಮೋದಿ ಕರೆ

Team Udayavani, Jun 17, 2019, 11:48 AM IST

ಹೊಸದಿಲ್ಲಿ : ವಿರೋಧ ಪಕ್ಷಗಳು “ಪಕ್ಷ, ವಿಪಕ್ಷ, ನಿಷ್ಪಕ್ಷ’ ಎಂಬಿತ್ಯಾದಿಗಳನ್ನು ಮರೆತು ದೇಶ  ಹಿತಾಸಕ್ತಿಯ ಸ್ಫೂರ್ತಿಯಿಂದ ದುಡಿಯಲು ಒಂದಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ವಿರೋಧ ಪಕ್ಷಗಳು ಲೋಕಸಭೆಯಲ್ಲಿನ ತಮ್ಮ ಸಂಖ್ಯೆಯನ್ನು ದೃಷ್ಟಿಯಲ್ಲಿರಿಸಿಕೊಳ್ಳದೆ ದೇಶದ ಸಮಗ್ರ ಅಭಿವೃದ್ದಿಗೆ ಒಗ್ಗಟ್ಟಿನಿಂದ ದುಡಿಯಲು ಮುಂದಾಗಬೇಕು ಎಂದು ಮೋದಿ ಹೇಳಿದರು.

“ಪಕ್ಷ (ಆಡಳಿತ), ವಿಪಕ್ಷ (ವಿರೋಧ ಪಕ್ಷ), ನಿಷ್ಪಕ್ಷ (ಪೂರ್ವಗ್ರಹರಹಿತ) ಪರಿಕಲ್ಪನೆಯನ್ನು ಮೀರಿ ಸ್ಪೂರ್ತಿಯಿಂದ ದೇಶದ ಒಟ್ಟು ಹಿತಾಸಕ್ತಿಗಾಗಿ ಒಗ್ಗೂಡಿ ಶ್ರಮಿಸುವುದು ಮುಖ್ಯ; ಮುಂದಿನ ಐದು ವರ್ಷ ನಾವು ಸಂಸತ್ತಿನ ಘನತೆ ಕಾಪಿಡಲು ಶ್ರಮಿಸುವೆವು’ ಎಂದು ಮೋದಿ ಹೇಳಿದರು.

ಲೋಕಸಭೆಯಲ್ಲಿನ ತಮ್ಮ ಸಂಖ್ಯೆಯ ಬಗ್ಗೆ ಚಿಂತಿಸದೆ ಸಕ್ರಿಯವಾಗಿ ಕಾರ್ಯವೆಸಗುವ ವಿರೋಧ ಪಕ್ಷದ ಅಗತ್ಯವಿದೆ’ ಎಂದು ಮೋದಿ ಹೇಳಿದರು.

‘ಅನೇಕ ದಶಕಗಳ ಬಳಿಕ ಸರಕಾರವೊಂದು ಎರಡನೇ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ. ಜನರು ದೇಶ ಸೇವೆಗಾಗಿ ನಮಗೆ ಇನ್ನೊಂದು ಅವಕಾಶ ನೀಡಿದ್ದಾರೆ. ಅಂತೆಯೇ ಜನರ ಪರವಾಗಿ ಕೈಗೊಳ್ಳುವ ನಿರ್ಧಾರಗಳನ್ನು ಎಲ್ಲ ಪಕ್ಷಗಳು ಬೆಂಬಲಿಸಬೇಕು ಎಂದು ನಾನು ವಿನಂತಿಸುತ್ತೇನೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ವೇಳೆ ಇಂದು ಸೋಮವಾರ ಪ್ರಧಾನಿ ಮೋದಿ ಅವರು ಸಂಸತ್ತಿನ ಓರ್ವ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿಯ ಬಳಿಕ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗೃಹ ಸಚಿವ ಅಮಿತ್‌ ಶಾ ಅವರು ಕೂಡ ಸಂಸತ್‌ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ