ದೇಶದ ಆರ್ಥಿಕ ಸ್ಥಿತಿ ಚೇತರಿಕೆಗೆ ಖ್ಯಾತ ಆರ್ಥಿಕ ತಜ್ಞನ ‘ಪಂಚ ಸೂತ್ರ’ಗಳು

ಆರ್ಥಿಕ ಹಿನ್ನಡೆಗೆ ತುರ್ತು ಪರಿಹಾರ ಕಂಡುಹಿಡಿಯದಿದ್ದಲ್ಲಿ ಹಳ್ಳ ಹಿಡಿಯಲಿದೆ ನಮ್ಮ ಅರ್ಥ ವ್ಯವಸ್ಥೆ ಎಂದ ಡಾ. ಮನಮೋಹನ್ ಸಿಂಗ್

Team Udayavani, Sep 12, 2019, 7:11 PM IST

ನವದೆಹಲಿ: ಮಾಜೀ ಪ್ರಧಾನ ಮಂತ್ರಿ ಹಾಗೂ ಖ್ಯಾತ ಆರ್ಥಿಕ ತಜ್ಞರಾಗಿರುವ ಡಾ. ಮನಮೋಹನ್ ಸಿಂಗ್ ಅವರು ದೇಶದಲ್ಲಿ ಪ್ರಸ್ತುತ ಕಾಣಿಸಿಕೊಂಡಿರುವ ಆರ್ಥಿಕ ಹಿನ್ನಡೆಗೆ ತಕ್ಕ ಉತ್ತರವನ್ನು ನೀಡಲು ‘ಪಂಚ ಸೂತ್ರಗಳ’ನ್ನು ನೀಡಿದ್ದಾರೆ.

ಆದರೆ ನರೇಂದ್ರ ಮೋದಿ ನೇತೃತ್ವದ ಸರಕಾರವು ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿರುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು ಎಂದೂ ಸಹ ಡಾ. ಸಿಂಗ್ ಸಲಹೆ ನೀಡಿದ್ದಾರೆ. ಹಾಗಾದಾಗ ಮಾತ್ರವೇ ಇವುಗಳ ಸುಧಾರಣೆಗೆ ಸರಕಾರ ಉಪಕ್ರಮಗಳನ್ನು ಕೈಗೊಳ್ಳಬಹುದಾಗಿರುತ್ತದೆ ಎಂಬುದು ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರ ಅಭಿಪ್ರಾಯ.

ಸರಕು ಮತ್ತು ಸೇವಾ ತೆರಿಗೆಯನ್ನು (ಜಿ.ಎಸ್.ಟಿ.) ಇನ್ನಷ್ಟು ಪರಿಣಾಮಕಾರಿಗೊಳಿಸುವುದು, ಮಾರುಕಟ್ಟೆಯಲ್ಲಿ ಗ್ರಾಹಕ ಬೇಡಿಕೆಯನ್ನು ಹೆಚ್ಚಿಸುವುದು, ಕೃಷಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವುದು ಮತ್ತು ಸಾಲ ಕೊರತೆಯನ್ನು ಸರಿದೂಗಿಸುವುದೇ ಮೊದಲಾದ ಉಪಕ್ರಮಗಳಿಂದ ದೇಶದ ಆರ್ಥಿಕ ಸ್ಥಿತಿ ನಿಧಾನವಾಗಿ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಡಾ. ಸಿಂಗ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ದೇಶದ ಆರ್ಥಿಕ ಸ್ಥಿತಿ ಚೇತರಿಕೆಗೆ ಡಾ. ಮನಮೋಹನ್ ಸಿಂಗ್ ಅವರು ಹಂಚಿಕೊಂಡಿರುವ ‘ಪಂಚ ಸೂತ್ರ’ಗಳು ಹೀಗಿವೆ:

ಜಿ.ಎಸ್.ಟಿ. ಪುನಶ್ಚೇತನ:
ನೋಟು ರದ್ಧತಿ ಹಾಗೂ ಅವಸರದ ಜಿ.ಎಸ್.ಟಿ ಅನುಷ್ಠಾನಗಳೇ ದೇಶದಲ್ಲಿ ಇವತ್ತು ಕಾಣಿಸಿಕೊಂಡಿರುವ ಆರ್ಥಿಕ ಹಿನ್ನಡೆಗೆ ಕಾರಣ ಎಂದು ಅಭಿಪ್ರಾಯಪಟ್ಟಿರುವ ಡಾ. ಸಿಂಗ್ ಅವರು, ಈ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಜಿ.ಎಸ್.ಟಿ. ದರಗಳಲ್ಲಿ ಸುಧಾರಣೆಗಳನ್ನು ತರುವಂತೆ ಸಲಹೆ ನೀಡಿದ್ದಾರೆ.

ಹೀಗೆ ಮಾಡುವುದರಿಂದ ಅಲ್ಪಕಾಲೀನವಾಗಿ ಸರಕಾರದ ಬೊಕ್ಕಸಕ್ಕೆ ಆದಾಯ ಕೊರತೆ ಉಂಟಾಗಬಹುದಾದರೂ ದೀರ್ಘಕಾಲದಲ್ಲಿ ಈ ನಡೆ ನಮ್ಮ ಆರ್ಥಿಕತೆಗೆ ಚೇತರಿಕೆ ನೀಡಲಿದೆ ಎಂದು ತಿಳಿಸಿದ್ದಾರೆ. ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವ ಮೋಟಾರು ಮಾರುಕಟ್ಟೆಯೂ ಸಹ ಜಿ.ಎಸ್.ಟಿ. ಕಡಿತಕ್ಕೆ ಸರಕಾರವನ್ನು ಆಗ್ರಹಿಸಿರುವುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ಬೇಡಿಕೆ ಸೃಷ್ಟಿ
ದೇಶದ ಮಾರುಕಟ್ಟೆ ವಲಯದಲ್ಲಿ ಗ್ರಾಹಕ ಬೇಡಿಕೆ ಅಂಶ ಗಣನೀಯವಾಗಿ ಕುಸಿದಿದ್ದು ಇದರಿಂದ ಮಾರುಕಟ್ಟೆಯಲ್ಲಿ ಹಣದ ಹರಿವಿನ ಪ್ರಮಾಣ ನಿಧಾನಗೊಂಡಿರುವುದೂ ಸಹ ಪ್ರಸಕ್ತ ಆರ್ಥಿಕ ಹಿನ್ನಡೆಗೆ ಕಾರಣ ಎಂಬುದು ಮಾಜೀ ಪ್ರಧಾನಿಯವರ ವಾದ. ಹೀಗಾಗಿ ಗ್ರಾಹಕಮಟ್ಟದಲ್ಲಿ ಬೇಡಿಕೆ ಉತ್ತೇಜನಕ್ಕೆ ‘ನವೀನ ಮಾರ್ಗ’ಗಳನ್ನು ಕಂಡುಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಅವರು ಸಲಹೆ ನೀಡಿದ್ದಾರೆ.

ದೇಶದಲ್ಲಿ ಖರೀದಿ ಸಾಮರ್ಥ್ಯವನ್ನು ಉತ್ತೇಜಿಸುವಲ್ಲಿ ಯಾವುದೇ ಸರಕಾರ ವಿಫಲವಾದಾಗ ಈ ರೀತಿಯ ದೀರ್ಘಕಾಲೀನ ಆರ್ಥಿಕ ಸಂಕಷ್ಟ ಕಾಣಿಸಿಕೊಳ್ಳುತ್ತದೆ, ಗ್ರಾಹಕರ ಖರೀದಿ ಸಾಮರ್ಥ್ಯವೇ ಆರ್ಥಿಕ ಅಭಿವೃದ್ಧಿಯ ಪ್ರಮುಖ ಸೂಚ್ಯಂಕಗಳಲ್ಲಿ ಒಂದಾಗಿದೆ ಎನ್ನುವುದು ಡಾ. ಸಿಂಗ್ ಅವರ ಅಭಿಪ್ರಾಯ.

‘5 ರೂಪಾಯಿ ದರದ ಪಾರ್ಲೆ ಬಿಸ್ಕಟ್ ಮಾರಾಟದಲ್ಲೇ ಗಣನೀಯ ಕುಸಿತವಾಗಿದೆ ಎಂಬ ಅಂಶವೇ ನಮ್ಮ ದೇಶದ ಪ್ರಸಕ್ತ ಆರ್ಥಿಕತೆಯ ಚಿತ್ರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ…’ ಎಂದವರು ಉದಾಹರಣೆ ಸಹಿತ ವಿವರಿಸಿದ್ದಾರೆ. ಗ್ರಾಹಕ ವಲಯದಲ್ಲಿ ಖರೀದಿ ಸಾಮರ್ಥ್ಯ ಕುಸಿದಿರುವುದರ ಅಲ್ಪಕಾಲೀನ ಪರಿಣಾಮಗಳನ್ನು ನಾವಿಂದು ಎದುರಿಸುತ್ತಿದ್ದೇವೆ ಎನ್ನುವುದು ಅವರ ವಾದವಾಗಿದೆ.

ಶ್ರಮ ಆಧಾರಿತ ಕ್ಷೇತ್ರಗಳಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು
ದೇಶದ ಆರ್ಥಿಕ ಚೇತರಿಗೆ ಮನಮೋಹನ್ ಸಿಂಗ್ ಅವರು ನೀಡಿರುವ ಇನ್ನೊಂದು ಪ್ರಮುಖ ಸಲಹೆಯಲ್ಲಿ, ಮೋಟಾರು ವಲಯ, ರಿಯಲ್ ಎಸ್ಟೇಟ್ ಸೇರಿದಂತೆ ಕಾರ್ಮಿಕ ಶ್ರಮವನ್ನು ನಂಬಿಕೊಂಡಿರುವ ಕ್ಷೇತ್ರಗಳಲ್ಲಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕೆನ್ನುವುದು ಆಗಿದೆ. ಈ ವಿಚಾರವನ್ನು ಕೇಂದ್ರ ಸರಕಾರ ಯಾವುದೇ ವಿಳಂಬ ಮಾಡದೇ ಪರಿಗಣಿಸಬೇಕು ಎಂಬುದು ಡಾ. ಸಿಂಗ್ ಅವರ ಒತ್ತಾಯವಾಗಿದೆ.

ಉದಾಹರಣೆಗೆ ದೇಶದ ಮೋಟಾರು ಕ್ಷೇತ್ರದಲ್ಲಿ ಸುಮಾರು 30 ಲಕ್ಷದಷ್ಟು ಉದ್ಯೋಗಿಗಳು ದುಡಿಯುತ್ತಿದ್ದಾರೆ, ಇವರಲ್ಲಿ ಸರಿಸುಮಾರು ಮೂರು ಲಕ್ಷದಷ್ಟು ಜನ ಇದೀಗ ಕೆಲಸ ಕಳೆದುಕೊಂಡಿದ್ದಾರೆ. ಆದರೆ ಪ್ರಸಕ್ತ ಮಾರುಕಟ್ಟೆ ಸ್ಥಿತಿಯನ್ನು ಅವಲೋಕಿಸುವಾಗ ಮುಂಬರುವ ದಿನಗಳಲ್ಲಿ ಈ ಸಂಖ್ಯೆ 10 ಲಕ್ಷವನ್ನೂ ದಾಟುವ ನಿರೀಕ್ಷೆ ಇದೆ ಎಂಬ ಭೀತಿಯನ್ನು ಕೈಗಾರಿಕಾ ಸೂಚಿಗಳೇ ಹೇಳುತ್ತಿರುವುದು ಕಳವಳಕಾರಿ ವಿಚಾರ ಎಂಬ ಅಭಿಪ್ರಾಯವನ್ನು ಡಾ. ಸಿಂಗ್ ಅವರು ವ್ಯಕ್ತಪಡಿಸಿದ್ದಾರೆ.

ಇನ್ನು ದಿನಕೂಲಿ ಲೆಕ್ಕದಲ್ಲಿ ಲಕ್ಷಾಂತರ ಕಾರ್ಮಿಕರ ಶ್ರಮವನ್ನು ಬಳಸಿಕೊಳ್ಳುವ, ರಿಯಲ್ ಎಸ್ಟೇಟ್ ಕ್ಷೇತ್ರದ ಪರಿಸ್ಥಿತಿಯೂ ಸಹ ಶೋಚನೀಯವಾಗಿದೆ. ಇವುಗಳಿಗೆಲ್ಲಾ ತಕ್ಷಣವೇ ಸರಕಾರ ಸ್ಪಂದಿಸಬೇಕು ಎಂದು ಮನಮೋಹನ್ ಸಿಂಗ್ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದರು.

ಹಣದ ಹರಿವಿಗೆ ಉತ್ತೇಜನ
ದೇಶದಲ್ಲಿ ಪ್ರಸಕ್ತ ಕಾಣಿಸಿಕೊಂಡಿರುವ ಆರ್ಥಿಕ ಹಿನ್ನಡೆಗೆ ಮಾರುಕಟ್ಟೆಯಲ್ಲಿ ಹಣದ ಹರಿವಿನ ಪ್ರಮಾಣ ಗಣನೀಯ ಮಟ್ಟದಲ್ಲಿ ಕಡಿಮೆಯಾಗಿರುವುದೂ ಒಂದು ಕಾರಣ ಎಂಬ ವಿಚಾರವನ್ನು ಡಾ. ಸಿಂಗ್ ಅವರು ಚರ್ಚಿಸಿದ್ದಾರೆ.

ದೇಶದ ವ್ಯವಹಾರ ಕ್ಷೇತ್ರಕ್ಕೆ, ಅದರಲ್ಲೂ ಮುಖ್ಯವಾಗಿ ಮಧ್ಯಮ ಮತ್ತು ಸಣ್ಣ ಗಾತ್ರದ ಉದ್ಯಮ ವಲಯಕ್ಕೆ ಬ್ಯಾಂಕ್ ಸಾಲ ನೀಡುವಿಕೆ ಪ್ರಮಾಣಕ್ಕೆ ಕಡಿತ ಹಾಕಿದ ದಿನದಿಂದಲೇ ಅಂದರೆ 2018ರಿಂದ ಭಾರತೀಯ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಅಭಿವೃದ್ಧಿ ಮಂದಗತಿಯಲ್ಲಿದೆ. ಇನ್ನು 2016ರಲ್ಲಿ ನೋಟ್ ಬ್ಯಾನ್ ಆದ ಬಳಿಕ ಮಧ್ಯಮ ಮತ್ತು ಸಣ್ಣ ಉದ್ದಿಮೆ ವಲಯಕ್ಕೆ ಗಂಭೀರ ಹೊಡೆತ ಬಿತ್ತು ಎಂಬುದನ್ನು ಡಾ. ಸಿಂಗ್ ಅವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಜಿ.ಎಸ್.ಟಿ. ಮಾದರಿಯ ತೆರಿಗೆ ಸಂಗ್ರಹದಲ್ಲಿರುವ ಹಲವಾರು ನ್ಯೂನತೆಗಳು ಸಹ ದೇಶದ ಮಧ್ಯಮ ಮತ್ತು ಸಣ್ಣ ಉದ್ದಿಮೆಗಳ ಮಂದಗತಿ ಪ್ರಗತಿಗೆ ಕಾರಣವಾಯ್ತು ಎಂದು ಡಾ.ಸಿಂಗ್ ಅವರು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ರಫ್ತು ಅವಕಾಶಗಳಿಗೆ ಇನ್ನಷ್ಟು ಒತ್ತುನೀಡುವುದು
ಅಮೆರಿಕಾ ಮತ್ತು ಚೀನಾ ನಡುವಿನ ವ್ಯಾಪಾರ ಸಮರದಿಂದ ವಿಶ್ವಮಟ್ಟದಲ್ಲಿ ಕಾಣಿಸಿಕೊಂಡಿರುವ ಆರ್ಥಿಕ ಗೊಂದಲಗಳಿಂದ ಪಾರಾಗಲು ಭಾರತ ಹೊಸ ರಫ್ತು ಅವಕಾಶಗಳನ್ನು ಹುಡುಕುವಂತಾಗಬೇಕು ಎನ್ನುವುದು ಡಾ.ಸಿಂಗ್ ಅವರ ಸಲಹೆಯಾಗಿದೆ.

ಇದಕ್ಕಾಗಿ ಹೊಸತಾದ ಒಂದು ರಫ್ತು ಮಾರ್ಗಸೂಚಿಯನ್ನು ಭಾರತವು ತಕ್ಷಣವೇ ರೂಪಿಸಬೇಕು ಇದರಿಂದ ದೇಶದ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಖಂಡಿತವಾಗಿಯೂ ಸಹಕಾರಿಯಾಗಲಿದೆ ಎನ್ನುವುದು ಡಾ. ಮನಮೋಹನ್ ಸಿಂಗ್ ಅವರ ಅಭಿಪ್ರಾಯ. ಖಾಸಗಿ ಹೂಡಿಕೆದಾರರನ್ನು ಆಕರ್ಷಿಸಲೂ ಸಹ ಕೇಂದ್ರ ಸರಕಾರವು ಹೆಚ್ಚಿನ ಪ್ರಯತ್ನಗಳನ್ನು ನಡೆಸಬೇಕೆನ್ನುವುದು ಡಾ. ಸಿಂಗ್ ಅವರ ಇನ್ನೊಂದು ಸಲಹೆಯಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ