ಪದೇ ಪದೆ ರಾಹುಲ್ ವಿದೇಶ ಪ್ರವಾಸದ ರಹಸ್ಯವೇನು?
Team Udayavani, Nov 1, 2019, 1:19 AM IST
ಹೊಸದಿಲ್ಲಿ: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪದೇ ಪದೆ ಏಕೆ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಮತ್ತು ಅದರಲ್ಲಿ ಏನು ರಹಸ್ಯವಿದೆ ಎಂದು ಬಿಜೆಪಿ ಗುರುವಾರ ಪ್ರಶ್ನೆ ಮಾಡಿದೆ. ಕೇಂದ್ರ ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಕಾಂಗ್ರೆಸ್ ನ.5ರಿಂದ 15ರವರೆಗೆ ದೇಶಾದ್ಯಂತ ಪ್ರತಿಭಟನೆ ನಡೆಸಲು ಸಿದ್ಧವಾಗಿರುವಂತೆಯೇ ರಾಹುಲ್ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹ ರಾವ್ ಮಾತನಾಡಿ, ಲೋಕಸಭಾ ಕ್ಷೇತ್ರವಾಗಿದ್ದ ಅಮೇಠಿಗೆ ಹೋಗುವುದಕ್ಕಿಂತ ಎರಡಷ್ಟು ಹೆಚ್ಚು ಅಂದರೆ 5 ವರ್ಷಗಳಲ್ಲಿ 16 ಬಾರಿ ರಾಹುಲ್ ವಿದೇಶ ಪ್ರವಾಸ ಹೋಗಿದ್ದಾರೆ ಎಂದರು. ಈ ಪೈಕಿ 9 ಬಾರಿಯ ಪ್ರವಾಸದ ವಿವರವೇ ಬಹಿರಂಗವಾಗಿಲ್ಲ. ಹೀಗಾಗಿಯೇ ಅಮೇಠಿಯ ಮತದಾರರು ಅವರನ್ನು ಸೋಲಿಸಿದ್ದಾರೆ ಎಂದು ಟೀಕಿಸಿದ್ದಾರೆ. ಅವರೇನಾದರೂ ರಹಸ್ಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪ್ರಶ್ನೆ ಮಾಡಿದ ಅವರು, ಲೋಕಸಭೆಯ ಕಾರ್ಯಾಲಯವೂ ರಾಹುಲ್ ಪ್ರವಾಸದ ವಿವರ ಹೊಂದಿಲ್ಲ ಎಂದು ದೂರಿದರು.