ಎನ್‌ಐಎಗೆ ಮತ್ತಷ್ಟು ಬಲ

ತಿದ್ದುಪಡಿಗೆ ಲೋಕಸಭೆ ಸಮ್ಮತಿ ; ಕಾಯ್ದೆ ದುರ್ಬಳಕೆಯಾಗದು: ಶಾ

Team Udayavani, Jul 16, 2019, 5:39 AM IST

ಹೊಸದಿಲ್ಲಿ: “ಭಯೋತ್ಪಾದನೆಯನ್ನು ಮೂಲೋ ತ್ಪಾಟನೆ ಗೊಳಿ ಸುವುದೇ ನಮ್ಮ ಆದ್ಯತೆಯಾಗಿದ್ದು, ಮೋದಿ ನೇತೃತ್ವದ ಸರಕಾರದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯ್ದೆಯ ದುರುಪಯೋಗವಾಗದು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೋಮವಾರ ಲೋಕಸಭೆಯಲ್ಲಿ ಘೋಷಿಸಿದ್ದಾರೆ.

ಭಾರತೀಯರ ಮೇಲೆ ಉಗ್ರ ಕೃತ್ಯ ಮತ್ತು ಭಾರತದ ಹಿತಾಸಕ್ತಿಗಳಿಗೆ ಧಕ್ಕೆಯಾಗುವ ಭಯೋತ್ಪಾದಕ ಪ್ರಕರಣಗಳಲ್ಲಿ ಎನ್‌ಐಎಗೆ ವಿದೇಶಗಳಲ್ಲಿ ತನಿಖೆ ನಡೆಸುವ ಅವಕಾಶ ನೀಡುವ ತಿದ್ದುಪಡಿ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಶಾ ಮಾತನಾಡಿದರು. ಕಾಂಗ್ರೆಸ್‌ ನೇತೃತ್ವದ ಯುಪಿಎ ಅವಧಿ ಯಲ್ಲಿ ರಾಜಕೀಯ ಉದ್ದೇಶಗಳಿಗಾಗಿ ಪೋಟಾ
(ಉಗ್ರವಾದ ನಿಗ್ರಹ ಕಾಯ್ದೆ) ರದ್ದು ಮಾಡಲಾಯಿತು. ಹೀಗಾಗಿಯೇ 2004-2008ರ ಅವಧಿಯಲ್ಲಿ ಉಗ್ರ ಕೃತ್ಯಗಳು ಹೆಚ್ಚಾದವು. ಯುಪಿಎ ಸರಕಾರ ಪೋಟಾವನ್ನು ದುರ್ಬಳಕೆ ಆಗುತ್ತದೆ ಎನ್ನುವುದಕ್ಕಿಂತ ವೋಟ್‌ ಬ್ಯಾಂಕ್‌ಗಾಗಿಯೇ ರದ್ದು ಮಾಡಿತು ಎಂದೂ ಶಾ ದೂರಿದ್ದಾರೆ.

“ಭಯೋತ್ಪಾದನೆ ನಿರ್ಮೂಲನೆಯೇ ನಮ್ಮ ಉದ್ದೇಶ. ಉಗ್ರ ಕೃತ್ಯಗಳಲ್ಲಿ ಭಾಗಿಯಾದವರು ಯಾವ ಧರ್ಮಕ್ಕೆ ಸೇರಿದವರು ಎಂದು ನೋಡಿಕೊಂಡು ಕ್ರಮ ಕೈಗೊಳ್ಳುವುದಿಲ್ಲ. ಬದಲಾಗಿ ಕುಕೃತ್ಯದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ. ನರೇಂದ್ರ ಮೋದಿ ನೇತೃತ್ವದ ಸರಕಾರ ಕಾನೂನು ದುರುಪಯೋಗ ಮಾಡುವುದಿಲ್ಲ’ ಎಂದರು.

ನಿಗದಿತ ಸಮುದಾಯದರನ್ನು ಗುರಿ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳ ಸಂಸದರ ಟೀಕೆಗೆ ಉತ್ತರಿಸಿದ ಶಾ,”ಭಯೋತ್ಪಾದನೆಗೆ ಎಡ, ಬಲ ಎಂಬುದು ಇಲ್ಲ. ಭಯೋತ್ಪಾದನೆ, ಭಯೋತ್ಪಾದನೆ ಮಾತ್ರ’ ಎಂದರು. ಸಂಝೋತಾ ಎಕ್ಸ್‌ಪ್ರೆಸ್‌ ಸ್ಫೋಟ ಪ್ರಕರಣದಲ್ಲಿ ಕಾಂಗ್ರೆಸ್‌ ಅಮಾಯಕರನ್ನು ಬಂಧಿಸಿದೆ ಮತ್ತು ಹಲವು ಬಾರಿಯು ಟರ್ನ್ ಮಾಡಿದೆ ಎಂದೂ ದೂರಿದರು.

ಕಾಂಗ್ರೆಸ್‌ನ ಮನೀಷ್‌ ತಿವಾರಿ ಮಾತನಾಡಿ “ತಿದ್ದುಪಡಿ ಮಸೂದೆಯ ಮೂಲಕ ಭಾರತವನ್ನು ಪೊಲೀಸ್‌ ರಾಜ್ಯ ವನ್ನಾಗಿ ಮಾಡುವ ಪ್ರಯತ್ನ ಇದು’ ಎಂದು ಆರೋಪಿಸಿದರು. ಬಿರುಸಿನ ಚರ್ಚೆಯ ಬಳಿಕ ಮಸೂದೆಕ್ಕೆ ಲೋಕಸಭೆ ಧ್ವನಿಮತದಿಂದ ಅಂಗೀಕಾರ ನೀಡಿತು.

ಅಪಘಾತದಲ್ಲಿ ಅಸುನೀಗಿದರೆ 5 ಲಕ್ಷ ರೂ.: ಇನ್ನು ಮುಂದೆ ರಸ್ತೆ ಅಪಘಾತದಲ್ಲಿ ಅಸುನೀಗಿದರೆ ಮೃತರ ಕುಟುಂಬಕ್ಕೆ 5 ಲಕ್ಷ ರೂ., ಗಾಯಗೊಂಡವರಿಗೆ 2.5 ಲಕ್ಷ ರೂ. ನೀಡಬೇಕು. ಇಂಥ ಪ್ರಸ್ತಾಪವನ್ನು ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿಧೇಯಕದಲ್ಲಿ ಪ್ರಸ್ತಾವಿಸಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಲೋಕಸಭೆಯಲ್ಲಿ ಅದನ್ನು ಮಂಡಿಸಿದ್ದಾರೆ. ಸಂಚಾರ ನಿಯಮ ಉಲ್ಲಂ ಸುವವರಿಗೆ ಕಠಿನ ನಿಯಮ, ಪಾಲನೆ ಮಾಡುವವರಿಗೆ ಪ್ರೋತ್ಸಾಹಕರ ಅಂಶಗಳನ್ನೂ ಅದು ಒಳಗೊಂಡಿದೆ. ಗಡ್ಕರಿ ಹೇಳುವ ಪ್ರಕಾರ ದೇಶದಲ್ಲಿನ ಶೇ.30ರಷ್ಟು ಡ್ರೈವಿಂಗ್‌ ಲೈಸನ್ಸ್‌ ನಕಲಿ. ಪ್ರತಿ ವರ್ಷ ಅಪಘಾತಗಳಿಂದ 5 ಲಕ್ಷ ಮಂದಿ ಗಾಯಗೊಂಡು, 1.5 ಲಕ್ಷ ಮಂದಿ ಅಸುನೀಗುತ್ತಾರೆ. ಹಿಂದಿನ ಅವಧಿಯಲ್ಲಿ ನನ್ನ ಸಚಿವಾಲಯ ಮಸೂದೆ ಅಂಗೀಕರಿಸಲು ವಿಫ‌ಲವಾಗಿತ್ತು. ಇದರ ಹೊರತಾಗಿಯೂ, ದೇಶದ ವಿವಿಧ ಭಾಗಗಳಲ್ಲಿ ಅಪಘಾತದ ಪ್ರಮಾಣ ಶೇ.3-4ರಷ್ಟು ಕಡಿಮೆಯಾಗಿದೆ. ಆದರೆ ತಮಿಳುನಾಡಿನಲ್ಲಿ ಅದರ ಪ್ರಮಾಣ ಶೇ.15ರಷ್ಟು ಎಂದಿದ್ದಾರೆ.

ಮಸೂದೆ ಮಂಡನೆ: ವಾಣಿಜ್ಯಿಕವಾಗಿ ಬಾಡಿಗೆ ತಾಯ್ತನ ಪದ್ಧತಿಗೆ ನಿಷೇಧ ಹೇರುವ ಮಸೂದೆವನ್ನು ಲೋಕಸಭೆ ಯಲ್ಲಿ ಮಂಡಿಸಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ಹರ್ಷವರ್ಧನ್‌ ಅವರು ಮಸೂದೆ ಮಂಡಿಸಿದ್ದಾರೆ.

ಅಮಿತ್‌ ಶಾ-ಅಸಾದುದ್ದೀನ್‌ ಒವೈಸಿ ವಾಗ್ವಾದ
ಸಚಿವ ಅಮಿತ್‌ ಶಾ ಮತ್ತು ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಒವೈಸಿ ನಡುವೆ ವಾಗ್ವಾದ ನಡೆದಿದೆ. ಎನ್‌ಐಎ ವಿಧೇಯಕದ ಮೇಲಿನ ಚರ್ಚೆಯಲ್ಲಿ ಬಿಜೆಪಿ ಸಂಸದ ಸತ್ಯಪಾಲ್‌ ಸಿಂಗ್‌ ಮಾತನಾಡುತ್ತಿದ್ದರು. ಪ್ರಕರಣವೊಂದರ ತನಿಖೆಯಲ್ಲಿ ಹೈದರಾಬಾದ್‌ನ ಅಂದಿನ ಪೊಲೀಸ್‌ ಆಯುಕ್ತರಿಗೆ ಮುಖ್ಯಮಂತ್ರಿಯೇ ಖುದ್ದಾಗಿ ಬಂಧಿತರ ವಿರುದ್ಧ ಕ್ರಮ ಕೈಗೊಳ್ಳದಂತೆ ಆದೇಶಿಸಿದ್ದರು. ಅಲ್ಲದೆ ಹೇಳಿದಂತೆ ಕೇಳದಿದ್ದರೆ ನಿಮ್ಮ ಹುದ್ದೆಗೇ ಧಕ್ಕೆಯಾಗಲಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಅವರು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದವರು. ಆ ಸಂದರ್ಭದಲ್ಲಿ ನಾನು ಮುಂಬೈ ಪೊಲೀಸ್‌ ಆಯುಕ್ತನಾಗಿದ್ದೆ ಎಂದು ಸಿಂಗ್‌ ಹೇಳಿದರು. ಈ ಸಂದರ್ಭದಲ್ಲಿ ಒವೈಸಿ ಮತ್ತು ವಿಪಕ್ಷಗಳ ಇತರ ಸದಸ್ಯರು ಗದ್ದಲ ಎಬ್ಬಿಸಿದರು. ಸಿಂಗ್‌ ತಮ್ಮ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸದನಕ್ಕೆ ಹಾಜರುಪಡಿಸಬೇಕು ಎಂದು ಒವೈಸಿ ಒತ್ತಾಯಿಸಿದರು. ಆಗ ಎದ್ದು ನಿಂತ ಸಚಿವ ಅಮಿತ್‌ ಶಾ “ಒವೈಸಿ ಮತ್ತು ಇತರರು ಜಾತ್ಯತೀತದ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಇತರರು ಮಾತನಾಡುವಾಗ ಆಡಳಿತ ಪಕ್ಷದ ನಾವೆಲ್ಲರೂ ಮೌನವಹಿಸಿ ಕೇಳಿದ್ದೇವೆ. ಒವೈಸಿ ಸಾಹೇಬರೇ, ಮತ್ತೂಬ್ಬರು ಮಾತನಾಡುವುದನ್ನು ಆಲಿಸಲು ಕಲಿಯಿರಿ’ ಎಂದರು. ಈ ಸಂದರ್ಭದಲ್ಲಿ ಕೈಬೆರಳನ್ನು ಸೂಚನಾರ್ಥಕವಾಗಿ ಬಳಕೆ ಮಾಡಿದ್ದು, ಒವೈಸಿಯವರನ್ನು ಕೆರಳಿಸಿತು. “ನೀವು ಕೈ ಬೆರಳು ತೋರಿಸಿದರೆ ನಾನು ಹೆದರುತ್ತೇನೆಂದು ಭಾವಿಸಬೇಡಿ’ ಎಂದರು ಒವೈಸಿ. ಅದಕ್ಕೆ ಪ್ರತಿಕ್ರಿಯಿಸಿದ ಶಾ, “ನಿಮ್ಮ ಮನಸ್ಸಿನಲ್ಲಿ ಆ ರೀತಿ ಹೆದರಿಕೆ ಇದ್ದರೆ ನಾನೇನು ಮಾಡಲಿ?’ ಎಂದು ತಿರುಗೇಟು ನೀಡಿದರು.

ನೆರೆ, ಪ್ರವಾಹ ನಿರೋಧಕ ಬೀಜ
ಹವಾಮಾನ ಬದಲಾವಣೆಯಿಂದ ದೇಶದ ಕೃಷಿ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹೀಗಾಗಿ, ಪ್ರವಾಹ, ಬರ ಮತ್ತು ಇತರ ಪ್ರತಿಕೂಲ ಸ್ಥಿತಿ ಗಳನ್ನು ಎದುರಿ ಸುವಂಥ ಬಿತ್ತನೆ ಬೀಜ ಅಭಿವೃದ್ಧಿಪಡಿ ಸುವ ಪ್ರಯತ್ನಗಳು ನಡೆದಿವೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ರಾಜ್ಯಸಭೆಯಲ್ಲಿ ತಿಳಿಸಿ ದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ಕೃಷಿ ಸಂಶೋಧನ ಮಂಡಳಿ (ಐಸಿ ಎಆರ್‌) ಅಧ್ಯಯನವನ್ನೂ ನಡೆಸಿದೆ ಎಂದು ಹೇಳಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ