ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಆದಾಯ ಹೆಚ್ಚಿಸಿ ವೆಚ್ಚ ತಗ್ಗಿಸಲು ಕ್ರಮ: ಸಿಎಂ ಸಾವಂತ್
Team Udayavani, May 24, 2022, 6:40 PM IST
ಪಣಜಿ: ರಾಜ್ಯದ ಹೆಚ್ಚಿನ ವೆಚ್ಚವನ್ನು ಪರಿಗಣಿಸಿ ವೆಚ್ಚವನ್ನು ಕಡಿಮೆ ಮಾಡಿ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅದಕ್ಕಾಗಿ ಮುಂದಿನ ತಿಂಗಳೊಳಗೆ ಹಣಕಾಸು ಇಲಾಖೆಯೊಂದಿಗೆ ವಿಸ್ತೃತವಾಗಿ ಚರ್ಚಿಸಿ ಆದಾಯ ಹೆಚ್ಚಿಸಿ ವೆಚ್ಚ ತಗ್ಗಿಸಬೇಕಿದೆ. ಆ ಮೂಲಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳು ಮುಂದುವರೆಯಲಿದ್ದು ನೌಕರರ ವೇತನ, ಪಿಂಚಣಿ, ಬಡ್ಡಿ ಮರುಪಾವತಿಯನ್ನು ಹಂತ ಹಂತವಾಗಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದರು.
ದೆಹಲಿಗೆ ತೆರಳಿದ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರನ್ನು ಭೇಟಿ ಮಾಡಿ ಚರ್ಚಿಸಿ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕೊರೋನಾ ಮಾಹಾಮಾರಿಯಿಂದ ಹದಗೆಟ್ಟಿರುವ ರಾಜ್ಯದ ಆರ್ಥಿಕ ಬಿಕ್ಕಟ್ಟಿನಿಂದ ರಾಜ್ಯವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ , ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ರಾಜ್ಯ ಪಂಚಾಯತ್ ಮಂತ್ರಿ ಮಾವಿನ್ ಗುದಿನ್ಹೊ ಮತ್ತು ರಾಜ್ಯ ಜಿಎಸ್‍ಟಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ರಾಜ್ಯಕ್ಕೆ ಜಿಎಸ್‍ಟಿ ರಿಯಾಯತಿಗಳು, ಹೊಸ ಆರ್ಥಿಕ ನೀತಿಯ ಪ್ರಕಾರ ವಿವಿಧ ಘಟಕಗಳ ತೆರಿಗೆ ಹೆಚ್ಚಳ ಮತ್ತು ಖನಿಜ ಉದ್ಯಮದ ಮೇಲಿನ ರಫ್ತು ತೆರಿಗೆಯನ್ನು ಹೆಚ್ಚಿಸುವ ಕುರಿತು ವಿವಿರವಾದ ಚರ್ಚೆ ನಡೆಸಲಾಯಿತು.