ಕೋವಿಡ್ ಹೆಚ್ಚಳ; ಗೋವಾದಲ್ಲಿ ಕರ್ಫ್ಯೂ ವಿಸ್ತರಣೆ ಸುಳಿವು ನೀಡಿದ ಸಿಎಂ ಸಾವಂತ್
Team Udayavani, Jul 10, 2021, 3:06 PM IST
ಪಣಜಿ: ನೆರೆಯ ರಾಜ್ಯಗಳಲ್ಲಿ ಡೆಲ್ಟಾಪ್ಲಸ್ ರೂಪಾಂತರಿ ಕೋವಿಡ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮತ್ತು ರಾಜ್ಯದಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಗೋವಾ ರಾಜ್ಯಾದ್ಯಂತ ಕರ್ಫ್ಯೂ ಕಾಲಾವಧಿಯನ್ನು ಇನ್ನೂ ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎಂಬ ಸಂಕೇತವನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೀಡಿದ್ದಾರೆ.
ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವ ಕರ್ಫ್ಯೂ ಜುಲೈ 12 ರಂದು ಬೆಳಿಗ್ಗೆ 7 ಗಂಟೆಗೆ ಮುಕ್ತಾಯಗೊಳ್ಳಲಿದೆ. ಸದ್ಯ ರಾಜ್ಯದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಅಂಗಡಿಯನ್ನು ತೆರೆಯಲು ಅವಕಾಶ ನೀಡಲಾಗಿದೆ.
ಈ ಕುರಿತಂತೆ ಪಣಜಿಯಲ್ಲಿ ಸುದ್ಧಿಗಾರರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಾವಂತ್- ರಾಜ್ಯದಲ್ಲಿ ಕೋವಿಡ್ ತಪಾಸಣೆಯ ಪೋಜಿಟಿವಿಟಿ ದರ ಶೇ 3 ರಿಂದ 4 ರಷ್ಟಿದೆ. ಪ್ರತಿದಿನ ಮೂರರಿಂದ ನಾಲ್ಕು ಜನ ಕರೋನಾ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಇದರಿಂದಾಗಿ ಇನ್ನೂ ಕೆಲ ದಿನಗಳ ಕಾಲ ರಾಜ್ಯದಲ್ಲಿ ಕರ್ಫ್ಯೂಮುಂದುವರೆಸುವುದು ಅನಿವಾರ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋವಾ ರಾಜ್ಯಾದ್ಯಂತ ಮೇ 9 ರಿಂದ ಕರ್ಫ್ಯೂ ಜಾರಿಯಲ್ಲಿದ್ದು, ಹಂತ ಹಂತವಾಗಿ ಕರ್ಫ್ಯೂ ಕಾಲಾವಧಿ ವಿಸ್ತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಹಂತ ಹಂತವಾಗಿ ಕಫ್ರ್ಯೂ ಸಡಿಲಿಕೆ ಮಾಡಲಾಗುತ್ತಿದೆ. ಆದರೆ ಇದುವರೆಗೂ ಸಿನೆಮಾ ಥಿಯೇಟರ್ ತೆರೆಯಲು ಅವಕಾಶ ನೀಡಲಾಗಿಲ್ಲ.
ಗೋವಾದಲ್ಲಿ ಕರೋನಾ ಸೋಂಕು ಏರಿಕೆ…!:
ಕಳೆದ ಕೆಲ ದಿನಗಳಿಂದ ಕರೋನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆಯಾಗುತ್ತಲೇ ಬಂದು ಪ್ರತಿದಿನ 200 ಕ್ಕಿಂತ ಕಡಿಮೆ ಸೋಂಕಿತರು ಪತ್ತೆಯಾಗುತ್ತಿದ್ದರು. ಆದರೆ ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು ಕಂಡುಬಂದಿದೆ. ಶುಕ್ರವಾರ ರಾಜ್ಯದಲ್ಲಿ 220 ಜನರಿಗೆ ಕರೋನಾ ಸೋಂಕು ದೃಢಪಟ್ಟಿದೆ.