ಆಶ್ರಯ ನೀಡಲು ನಕಾರ; ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಗಡಿಪಾರು
Team Udayavani, Aug 3, 2019, 12:05 PM IST
ತಮಿಳುನಾಡು: ನಿಯಮ ಮೀರಿ ಭಾರತ ಪ್ರವೇಶಿಸಲು ಯತ್ನಿಸಿದ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಅಹ್ಮದ್ ಅದ್ಸೀಬ್ ಅಬ್ದುಲ್ ಗಫೂರ್ ಅವರನ್ನು ಟ್ಯುಟಿಕಾರಿನ್ ಪೊಲೀಸರು ಬಂಧಿಸಿದ್ದು, ತಮಿಳುನಾಡು ಸರಕಾರ ಶನಿವಾರ ಮುಂಜಾನೆ ವೇಳೆ ಗಫೂರ ಅವರನ್ನು ಗಡಿಪಾರು ಮಾಡಿರುವುದಾಗಿ ವರದಿ ತಿಳಿಸಿದೆ.
ತನಗೆ ರಾಜಕೀಯ ಆಶ್ರಯ ನೀಡಿ ಎಂಬ ಗಫೂರ್ ಮನವಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ ಬಳಿಕ ತಮಿಳುನಾಡು ಸರಕಾರ ಅವರನ್ನು ಗಡಿಪಾರು ಮಾಡಿರುವುದಾಗಿ ಹೇಳಿದೆ.
ಯಾವುದೇ ಅಧಿಕೃತ ದಾಖಲೆ ಇಲ್ಲದೇ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಸಿಂಗಾಪುರ ನೋಂದಣಿಯ ನೌಕೆಯಲ್ಲಿ ಆಗಮಿಸಿದ್ದ ವೇಳೆ ಟ್ಯುಟಿಕಾರಿನ್ ಪೊಲೀಸರು ಬಂಧಿಸಿ, ಸರಕು ಸಾಗಣೆಯ ನೌಕೆಯಲ್ಲಿಯೇ ಇರಿಸಿದ್ದರು. ಹಣ ದುರುಪಯೋಗದ ಆರೋಪ ಎದುರಿಸುತ್ತಿದ್ದ ಅಹ್ಮದ್ ದೇಶ ಬಿಟ್ಟು ತೆರಳದಂತೆ ಮಾಲ್ಡೀವ್ಸ್ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.