ಡಿಪಿಡಿಪಿ ನಿಬಂಧನೆಗಳಿಂದ ಸ್ಟಾರ್ಟ್ಅಪ್ಗಳಿಗೆ ವಿನಾಯಿತಿ?
Team Udayavani, Dec 5, 2022, 7:30 AM IST
ನವದೆಹಲಿ: ಪ್ರಸ್ತಾವಿತ ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣೆ(ಡಿಪಿಡಿಪಿ) ವಿಧೇಯಕದ ಅಡಿಯಲ್ಲಿ ನಿಯಮಾವಳಿಗಳನ್ನು ಅನುಸರಿಸುವುದರಿಂದ ಆರಂಭಿಕ ಹಂತದ ಸ್ಟಾರ್ಟ್ಅಪ್ಗ್ಳಿಗೆ ವಿನಾಯಿತಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸ್ಟಾರ್ಟ್ಅಪ್ಗ್ಳು ತಮ್ಮ ವ್ಯಾಪಾರ ಮಾದರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಾಯ ಮಾಡಲು ಮತ್ತು ಅನುಸರಣೆಯ ಹೊರೆಯಿಂದಾಗಿ ನಾವೀನ್ಯತೆ ಮರೆಯಾಗದಂತಿರಲು ಸೀಮಿತ ಅವಧಿಗೆ ಮಾತ್ರ ಈ ವಿನಾಯಿತಿ ಇರಲಿದೆ.
“ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಡಿಪಿಡಿಪಿ ವಿಧೇಯಕದ ನಿಬಂಧನೆಗಳಿಂದ ಆರಂಭಿಕ ಹಂತದ ಸ್ಟಾರ್ಟ್ ಅಪ್ಗಳಿಗೆ ವಿನಾಯಿತಿ ನೀಡಲು ವಿಧೇಯದಲ್ಲಿ ಸುಧಾರಣೆ ತರುತ್ತಿದೆ,’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಇದೇ ವೇಳೆ ಡೇಟಾ ಉಲ್ಲಂಘನೆಗೆ ಒಳಗಾಗಿರುವ ವ್ಯಕ್ತಿಗಳಿಗೆ ಪರಿಹಾರದ ಆಯ್ಕೆ ಒದಗಿಸುವ ಐಟಿ ಕಾಯ್ದೆಯ ಒಂದು ಸೆಕ್ಷನ್ ತೆಗೆದುಹಾಕಲು ವಿಧೇಯಕ ಪ್ರಸ್ತಾಪಿಸುತ್ತದೆ. ಅದರ ನಿಬಂಧನೆಗಳನ್ನು ಜನರು ದುರುಪಯೋಗ ಪಡಿಸಿಕೊಳ್ಳುವುದನ್ನು ತಡೆಯಲು ಹಾಗೂ ಪರಿಹಾರ ಪಡೆಯುವುದನ್ನೇ ವ್ಯವಹಾರ ಮಾಡಿಕೊಳ್ಳುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ,’ ಎಂದು ಅವರು ವಿವರಿಸಿದರು.