ಮಾಸ್ಕ್ಡ್ ಆಧಾರ್: ಪ್ರಕಟಣೆ ಹಿಂಪಡೆದ ಕೇಂದ್ರ ಸರ್ಕಾರ
Team Udayavani, May 29, 2022, 9:51 PM IST
ನವದೆಹಲಿ: ಆಧಾರ್ ಕಾರ್ಡ್ನ ಫೋಟೋ ಪ್ರತಿಗಳನ್ನು (ಝೆರಾಕ್ಸ್ ಪ್ರತಿ) ಯಾವುದೇ ಸಂಸ್ಥೆಗಳಿಗೆ ನೀಡಬಾರದು, ಅದರ ಬದಲು ಮಾಸ್ಕ್ಡ್ ಆಧಾರ್ ನೀಡಬಹುದು ಎಂದು ಮೇ 27ರಂದು ನೀಡಲಾಗಿದ್ದ ಸಾರ್ವಜನಿಕ ಪ್ರಕಟಣೆಯನ್ನು ಕೇಂದ್ರ ಸರ್ಕಾರ ಭಾನುವಾರ ಹಿಂಪಡೆದಿದೆ.
“ಯಾವುದೇ ಸಂಸ್ಥೆಗಳಿಗೆ ಆಧಾರ್ ಕಾರ್ಡ್ ಫೋಟೋ ಪ್ರತಿ ನೀಡಬಾರದು. ಆಧಾರ್ ಕಡ್ಡಾಯವಾಗಿ ನೀಡಲೇಬೇಕಾದ ಅಗತ್ಯವಿರುವ ಕಡೆಗೆ ಮಾಸ್ಕ್ಡ್ ಆಧಾರ್ ಕಾರ್ಡ್ ನೀಡಬಹುದು. ಇದರಲ್ಲಿ ಆಧಾರ್ ಕಾರ್ಡ್ನ ಕಡೆಯ ನಾಲ್ಕು ಅಂಕಿಗಳು ಮಾತ್ರ ಗೋಚರಿಸುವಂತೆ ಸಿದ್ಧಪಡಿಸಲಾಗಿದ್ದು ಈ ಕಾರ್ಡನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವೆಬ್ಸೈಟ್ನಿಂದಲೇ ಡೌನ್ಲೋಡ್ ಮಾಡಿಕೊಳ್ಳಬಹುದು’ ಎಂದು ಮೇ 27ರಂದು ಹೊರಡಿಸಲಾಗಿದ್ದ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಆದರೆ, ಈ ಪ್ರಕಟಣೆಯು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. “ಆಧಾರ್ ಕಾರ್ಡ್ ವ್ಯವಸ್ಥೆಯು ಸದೃಢವಾಗಿದ್ದು ಯಾವುದೇ ವ್ಯಕ್ತಿಯ ಮಾಹಿತಿಯು ಸೋರಿಕೆಯಾಗಲು ಸಾಧ್ಯವೇ ಇಲ್ಲದಿರುವುದರಿಂದ ಈ ಪ್ರಕಟಣೆಯ ಅಗತ್ಯವಿಲ್ಲ’ ಎಂದು ಸರ್ಕಾರ ತಿಳಿಸಿದೆ.