ಗುಜರಾತ್ ಕಾಂಗ್ರೆಸ್ ನಾಯಕ ಜಿಗ್ನೇಶ್ ಮೇವಾನಿಗೆ ಆರು ತಿಂಗಳು ಜೈಲು ಶಿಕ್ಷೆ
Team Udayavani, Sep 16, 2022, 6:41 PM IST
ಅಹಮದಾಬಾದ್ : 2016 ರ ಗಲಭೆಯ ಪ್ರಕರಣದಲ್ಲಿ ಗುಜರಾತ್ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ, ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇತರ 18 ಮಂದಿಗೆ ಅಹಮದಾಬಾದ್‌ನ ನ್ಯಾಯಾಲಯವು ಶುಕ್ರವಾರ ಆರು ತಿಂಗಳ ಸಾಮಾನ್ಯ ಜೈಲು ಶಿಕ್ಷೆಯನ್ನು ವಿಧಿಸಿದೆ.
ಈ ಪ್ರಕರಣವು ಮೇವಾನಿ ಮತ್ತು ಅವರ ಸಹಚರರು ನಡೆಸಿದ ರಸ್ತೆ ತಡೆ ಆಂದೋಲನಕ್ಕೆ ಸಂಬಂಧಿಸಿದ್ದಾಗಿದ್ದು,ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಿ ಎನ್ ಗೋಸ್ವಾಮಿ ಅವರು ದಂಡ ವಿಧಿಸಿ, ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಡಲು ಅವರ ಶಿಕ್ಷೆಯನ್ನು ಅಕ್ಟೋಬರ್ 17 ರವರೆಗೆ ಅಮಾನತುಗೊಳಿಸಿದ್ದಾರೆ.
ಗುಜರಾತ್ ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಡಾ ಬಿ ಆರ್ ಅಂಬೇಡ್ಕರ್ ಹೆಸರಿಡಬೇಕು ಎಂದು ಒತ್ತಾಯಿಸಿ ರಸ್ತೆ ತಡೆ ನಡೆಸಿದ ಮೇವಾನಿ ಮತ್ತು ಇತರ 19 ಜನರ ವಿರುದ್ಧ 2016 ರಲ್ಲಿ ಇಲ್ಲಿನ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸೆಕ್ಷನ್ 143 (ಕಾನೂನುಬಾಹಿರ ಸಭೆ) ಮತ್ತು 147 (ಗಲಭೆ) ಹಾಗೂ ಗುಜರಾತ್ ಪೊಲೀಸ್ ಕಾಯಿದೆಯ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿದೆ.ಪ್ರಕರಣದ ವಿಚಾರಣೆಯ ಸಮಯದಲ್ಲಿ ಒಬ್ಬ ಆರೋಪಿ ಸಾವನ್ನಪ್ಪಿದ್ದು, ಪ್ರಮುಖ ದಲಿತ ನಾಯಕರಾದ ಮೇವಾನಿ ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಸ್ವತಂತ್ರವಾಗಿ ಗೆದ್ದಿದ್ದರು.ನಂತರ ಪಕ್ಷವು ಅವರನ್ನು ಗುಜರಾತ್ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿತ್ತು.