
ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ ಪತ್ತೆ
Team Udayavani, May 16, 2022, 12:49 PM IST

ವಾರಣಾಸಿ: ನ್ಯಾಯಾಲಯದ ಆದೇಶದಂತೆ ನಡೆದ ಜ್ಞಾನವಾಪಿ ಮಸೀದಿ ಸಂಕೀರ್ಣದ ವೀಡಿಯೊಗ್ರಫಿ ಸಮೀಕ್ಷೆಯು ಇಂದು (ಮೇ 16) ಪೂರ್ಣಗೊಂಡಿದೆ. ಸುಮಾರು 65 ಪ್ರತಿಶತದಷ್ಟು ಸರ್ವೇ ಕಾರ್ಯ ರವಿವಾರ ಪೂರ್ಣಗೊಂಡಿತ್ತು.
ಮಸೀದಿಯ ಬಾವಿಯೊಳಗೆ ಶಿವಲಿಂಗ ಕಂಡುಬಂದಿದೆ. ಅದರ ರಕ್ಷಣೆಗಾಗಿ ಸಿವಿಲ್ ನ್ಯಾಯಾಲಯದ ಮೊರೆ ಹೋಗುವುದಾಗಿ ವಕೀಲ ವಿಷ್ಣು ಜೈನ್ ಅವರು ಹೇಳಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ.
ಶಿವಲಿಂಗವು 12 ಅಡಿ 8 ಇಂಚು ವ್ಯಾಸವನ್ನು ಹೊಂದಿದೆ. ನಂದಿಗೆ ಮುಖಮಾಡಿರುವ ಶಿವಲಿಂಗ ಇದಾಗಿದೆ ಎಂದು ಹಿಂದೂ ಪರ ವಕೀಲರಾದ ಮದನ್ ಮೋಹನ್ ಯಾದವ್ ಹೇಳಿದ್ದಾರೆ.
ಸಮೀಕ್ಷೆ ನಡೆಸಲು ನ್ಯಾಯಾಲಯ ನೇಮಿಸಿದ ಸಮಿತಿ ಸ್ಥಳಕ್ಕೆ ಆಗಮಿಸಿದ್ದರಿಂದ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
ಇದನ್ನೂ ಓದಿ:ದತ್ತಪೀಠದ ಹೋಮ-ಹವನ ನಡೆಯುವ ಜಾಗದಲ್ಲಿ ಮಾಂಸಾಹಾರ; ಹಿಂದೂ ಪರ ಸಂಘಟನೆಗಳ ಆಕ್ರೋಶ
ಎರಡನೇ ದಿನದ ಸರ್ವೇಯಲ್ಲಿ, ಜ್ಞಾನವಾಪಿ ಮಸೀದಿಯ ಆವರಣ, ಮಸೀದಿಯ ಮೇಲಿರುವ ಮೂರು ಗುಮ್ಮಟಗಳನ್ನು ಸರ್ವೇ ಮಾಡಲಾಗಿತ್ತು.
“ಅಸಲಿಗೆ ಎರಡನೇ ದಿನದ ಸರ್ವೇ ಕಾರ್ಯ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ನಡೆಯಬೇಕಿತ್ತು. ಆದರೆ ಸರ್ವೇ ಕಾರ್ಯ ಅಂದುಕೊಂಡ ಸಮಯದಲ್ಲಿ ಪೂರ್ಣಗೊಳ್ಳಲಿಲ್ಲ. ಹಾಗಾಗಿ ಸರ್ವೇ ಕಾರ್ಯವನ್ನು ಇನ್ನೊಂದು ತಾಸಿನವರೆಗೆ (1 ಗಂಟೆಯವರೆಗೆ) ವಿಸ್ತರಿಸಲಾಯಿತು. ಆದರೂ ಸರ್ವೇ ಕಾರ್ಯ ಅಪೂರ್ಣ ಗೊಂಡಿತು. ಹಾಗಾಗಿ ಸೋಮವಾರದಂದು ಕೆಲಸ ಮುಂದುವರಿಸುವುದಾಗಿ ಕೋರ್ಟ್ ಕಮೀಷನ್ ತಿಳಿಸಿದೆ ಎಂದು ಜಿಲ್ಲಾಧಿಕಾರಿ ಕೌಶಲ್ ರಾಜ್ ಶರ್ಮಾ ರವಿವಾರ ತಿಳಿಸಿದ್ದರು.
ಸರ್ವೇ ಯಾಕೆ?: ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಸದ್ಯ ಕಾನೂನು ಹೋರಾಟ ಎದುರಿಸುತ್ತಿದೆ. ವಾರಣಾಸಿಯ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ರಚನೆಯ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ನಿರ್ದೇಶಿಸಿದೆ.
ಮಸೀದಿ ಸಂಕೀರ್ಣದಲ್ಲಿ ಹಿಂದೂ ಪೂಜಾ ಚಿಹ್ನೆಗಳು ಇವೆ ಎಂಬ ಹೇಳಿಕೆಗಳ ಹಿಂದಿನ ಸತ್ಯವನ್ನು ಕಂಡುಹಿಡಿಯಲು ಸಮೀಕ್ಷೆ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
