2ನೇ ಯತ್ನ; 2ನೇ ರ್‍ಯಾಂಕ್‌

Team Udayavani, Apr 29, 2018, 6:00 AM IST

ಹೊಸದಿಲ್ಲಿ: ಪತಿ, ಕುಟುಂಬದ ಯೋಗಕ್ಷೇಮ, ಮಗುವಿನ ಲಾಲನೆ ಪಾಲನೆಯ ಜವಾಬ್ದಾರಿ ಹೆಗಲಿಗೇರಿರುವಾಗ ಕನಸುಗಳನ್ನೆಲ್ಲ ಈಡೇರಿಸಿಕೊಳ್ಳಲು ಸಾಧ್ಯವೇ ಎಂದು ಮೂದಲಿಸುವವರಿಗೆ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದ್ವಿತೀಯ ರ್‍ಯಾಂಕ್‌ ಗಳಿಸಿರುವ ಅನು ಕುಮಾರಿ ಸ್ಫೂರ್ತಿಯ ಚಿಲುಮೆಯಾಗುವುದರಲ್ಲಿ ಸಂದೇಹವಿಲ್ಲ.

ಏಕೆಂದರೆ, ಯುಪಿಎಸ್‌ಸಿಯಲ್ಲಿ 2ನೇ ರ್‍ಯಾಂಕ್‌ ಪಡೆದಿರುವ ಹರ್ಯಾಣದ ಅನುಕುಮಾರಿ ಕೂಡ 4 ವರ್ಷದ ಗಂಡು ಮಗುವಿನ ತಾಯಿ. 31 ವರ್ಷದ ಅನುಕುಮಾರಿ ತಮ್ಮ 2ನೇ ಮತ್ತು ಕೊನೇ ಪ್ರಯತ್ನದಲ್ಲೇ ಯಶಸ್ಸು  ಸಾಧಿಸಿ, ರ್‍ಯಾಂಗ್‌ ಗಳಿಸಿದ್ದಾರೆ. ದೆಹಲಿ ವಿವಿಯ ಹಿಂದೂ ಕಾಲೇಜಿನಲ್ಲಿ ಭೌತಶಾಸ್ತ್ರದಲ್ಲಿ ಪದವಿ ಪಡೆದು, ಐಎಂಟಿ ನಾಗ್ಪುರದಲ್ಲಿ ಎಂಬಿಎ ಮುಗಿಸಿರುವ ಅನುಕುಮಾರಿ ತನ್ನ ಕನಸಿನ ಬೆನ್ನು ಹತ್ತುವ ಮೊದಲು 9 ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

“ನನ್ನ ಉದ್ಯೋಗ ಚೆನ್ನಾಗಿತ್ತು. ಆದರೆ, ಆಂತರಿಕ ತೃಪ್ತಿ ಎಂಬುದಿರಲಿಲ್ಲ. ಬದುಕು ಯಾಂತ್ರಿಕವಾಗಿ ಸಾಗುತ್ತಿದೆ ಎಂದೆನಿಸಿದಾಗ, ಕೆಲಸ ಬಿಟ್ಟು ಯುಪಿಎಸ್‌ಸಿ ಪರೀಕ್ಷೆ ಬರೆಯಲು ನಿರ್ಧರಿಸಿದೆ. 2 ವರ್ಷಗಳ ಹಿಂದೆ ಕೆಲಸ ತೊರೆದು, 2 ತಿಂಗಳು ಅಭ್ಯಾಸ ಮಾಡಿ ಪರೀಕ್ಷೆ ಬರೆದೆ. ಪ್ರಯೋಜನವಾಗಲಿಲ್ಲ. ಅದಕ್ಕೆ ಮತ್ತೆ ಪ್ರಯತ್ನಿಸಿದೆ. ಯಾವುದೇ ಕೋಚಿಂಗ್‌ ಕೂಡ ಪಡೆಯದೇ, ಈ ಬಾರಿ 2ನೇ ರ್‍ಯಾಂಕ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ’ ಎನ್ನುತ್ತಾರೆ ಅನು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ