ನನ್ನನ್ನು ಭಯೋತ್ಪಾದಕನಂತೆ ನೋಡಲಾಗುತ್ತಿದೆ: ಕಣ್ಣೀರಿಟ್ಟ ಎಸ್‌ಪಿ ನಾಯಕ ಆಜಂ ಖಾನ್‌

Team Udayavani, Apr 20, 2019, 11:06 AM IST

ರಾಮಪುರ, ಉತ್ತರ ಪ್ರದೇಶ : ‘ಸರಕಾರವು ನನ್ನನ್ನು ಭಯೋತ್ಪಾದಕನಂತೆ ಕಾಣುತ್ತಿದೆ. ನನ್ನ ಬೆಂಬಲಿಗರು ಮತ್ತು ಸಹವರ್ತಿಗಳ ವಿರುದ್ಧ ಆಡಳಿತೆಯು ಭಾರೀ ಕಾರ್ಯಾಚರಣೆಯನ್ನೇ ಕೈಗೊಂಡಿದೆ’ ಎಂದು ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್‌ ಕಣ್ಣೀರಿಡುತ್ತಾ ಭಾವನಾತ್ಮಕವಾಗಿ ಹೇಳಿದ್ದಾರೆ.

ರಾಮಪುರದಲ್ಲಿ ನಿನ್ನೆ ಶುಕ್ರವಾರ ರಾಲಿಯಲ್ಲಿ ಮಾತನಾಡುತ್ತಿದ್ದ ಆಜಂ ಖಾನ್‌, ‘ನನ್ನನ್ನು ರಾಷ್ಟ್ರ ವಿರೋಧಿ ಅಥವಾ ರಾಷ್ಟ್ರ ದ್ರೋಹಿ ಎಂಬಂತೆ ನೋಡಲಾಗುತ್ತಿದೆ. ಈ ಜಗತ್ತಿನ ಅತೀ ದೊಡ್ಡ ಭಯೋತ್ಪಾದಕ ನಾನೇ ಎಂಬ ರೀತಿಯಲ್ಲಿ ನನ್ನನ್ನು ಕಾಣಲಾಗುತ್ತಿದೆ. ಒಂದೊಮ್ಮೆ ಆಡಳಿತೆಯ ಅಧಿಕಾರದ ಮಿತಿಗೆ ಒಳಪಡುತ್ತಿದ್ದರೆ ಅದು ನನ್ನನ್ನು ಬಹಿರಂಗವಾಗಿ ಗುಂಡಿಕ್ಕಿ ಸಾಯಿಸುತ್ತಿತ್ತೇನೋ’ ಎಂದು ಹೇಳಿದರು.

‘ಮತದಾನಕ್ಕೆ ಕೇವಲ ಮೂರು ದಿನಗಳಿರುವಾಗ ಚುನಾವಣಾ ಆಯೋಗ ನನ್ನ ಮೇಲೆ ಪ್ರಚಾರ ನಿಷೇಧವನ್ನು ಹೇರಿರುವುದನ್ನು ಕಂಡರೆ ಅವರ ಉದ್ದೇಶ ಏನು ಎಂಬುದು ಸ್ಪಷ್ಟವಾಗುತ್ತಿದೆ. ಈ ನಿಷೇಧದ ವೇಳೆ ನಾನು ಎಲ್ಲಿಗೂ ಹೋಗುವಂತಿಲ್ಲ; ಯಾರನ್ನೂ ಭೇಟಿಯಾಗುವಂತಿಲ್ಲ, ಯಾವುದೇ ರಾಲಿಯಲ್ಲಿ ಪಾಲ್ಗೊಳ್ಳುವಂತಿಲ್ಲ ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಂತಿಲ್ಲ’ ಎಂದು ಆಜಂ ಖಾನ್‌ ಹೇಳಿದರು.

‘ನನ್ನ ಕ್ಷೇತ್ರವಾಗಿರುವ ರಾಮಪುರವನ್ನು ಆಡಳಿತೆಯು ಬಹುತೇಕ ಕಂಟೋನ್ಮೆಂಟ್‌ ಆಗಿ ಪರಿವರ್ತಿಸಿದೆ’ ಎಂದು ಖಾನ್‌ ಆರೋಪಿಸಿದರು.

ಕಳೆದ ಎಪ್ರಿಲ್‌ 15ರಂದು ಆಜಂ ಖಾನ್‌ ಅವರು ರಾಮಪುರ ಕ್ಷೇತ್ರದಲ್ಲಿನ ತನ್ನ ಎದುರಾಳಿ ಬಿಜೆಪಿ ಅಭ್ಯರ್ಥಿ ನಟಿ ಜಯಪ್ರದಾ ವಿರುದ್ಧ ತೀರ ಲೈಂಗಿಕ ಅವಹೇಳನಕಾರಿ ಮಾತುಗಳನ್ನು ಆಡಿ ನಿಷೇಧಕ್ಕೆ ಗುರಿಯಾಗಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ