ಸಲಿಂಗಕಾಮಿಗಳ ಅದ್ಧೂರಿ ವಿವಾಹ
Team Udayavani, Dec 19, 2021, 10:45 PM IST
ಹೈದರಾಬಾದ್: ಸಲಿಂಗಕಾಮಿಗಳ ವಿವಾಹಕ್ಕೆ ಭಾರತದಲ್ಲಿ ಮಾನ್ಯತೆ ಇಲ್ಲವಾದರೂ ತೆಲಂಗಾಣದ ಸಲಿಂಗಕಾಮಿ ಜೋಡಿ ಶನಿವಾರ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ.
ಅಭಯ್ ಡಾಂಗೆ ಮತ್ತು ಸುಪ್ರಿಯೋ ಚಕ್ರವರ್ತಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಬಿಳಿ ಸೂಟಿನಲ್ಲಿದ್ದ ಅವರಿಬ್ಬರು, ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದಾರೆ.
ಈ ವಿಶೇಷ ಮದುವೆಗೆ ಅವರು “ಪ್ರಾಮಿಸಿಂಗ್ ಸೆರ್ಮನಿ’ ಎನ್ನುವ ಹೆಸರನ್ನೂ ಕೊಟ್ಟಿದ್ದರು. ಕುಟುಂಬಸ್ಥರ ಒಪ್ಪಿಗೆಯೊಂದಿಗೆ, ಅವರ ಸಮ್ಮುಖದಲ್ಲೇ ನಡೆದ ಮದುವೆಯಲ್ಲಿ, ನವ ಜೋಡಿಯ ಸ್ನೇಹಿತರು ಸೇರಿ ಅನೇಕ ಆಪ್ತರು ಭಾಗವಹಿಸಿದ್ದರು.
ಈ ಜೋಡಿಯು ದಕ್ಷಿಣ ಭಾರತದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೊದಲನೇ ಸಲಿಂಗಕಾಮಿ ಜೋಡಿಯಾಗಿ ಹೆಸರು ಪಡೆದಿದೆ.