ಗಂಡು ಮಕ್ಕಳ ಮೇಲಿನ ದೌರ್ಜನ್ಯಕ್ಕೂ ಶಿಕ್ಷೆ ಹೆಚ್ಚಳ?
Team Udayavani, Jul 23, 2018, 10:20 AM IST
ಹೊಸದಿಲ್ಲಿ: ಗಂಡು ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲೂ ತಪ್ಪಿತಸ್ಥರ ಶಿಕ್ಷೆಯನ್ನು ಹೆಚ್ಚಿಸುವಂಥ ಪ್ರಸ್ತಾವವನ್ನು ಸಂಪುಟದ ಮುಂದಿಡಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ನಿರ್ಧರಿಸಿದೆ. ಈಗಾಗಲೇ ಕಾನೂನು ಇಲಾಖೆ ಪೋಕೊ ಕಾಯ್ದೆಗೆ ತಿದ್ದುಪಡಿ ತರಲು ಒಪ್ಪಿಗೆ ಸೂಚಿಸಿದೆ. ಇದನ್ನು ಸದ್ಯದಲ್ಲೇ ಸಂಪುಟದ ಮುಂದಿಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
12 ವರ್ಷದೊಳಗಿನ ಯಾವುದೇ ಮಗುವಿನ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದರೆ, ಅಂಥವರಿಗೆ ಗಲ್ಲು ವಿಧಿಸುವ ತಿದ್ದುಪಡಿ ತರಲೂ ಇಲಾಖೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.ಏತನ್ಮಧ್ಯೆ, ಅತ್ಯಾಚಾರ, ಕೊಲೆಯಂಥ ಪ್ರತಿ ಪ್ರಕರಣದಲ್ಲೂ ಬಾಲಾಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಬಾಲ ನ್ಯಾಯ ಸಮಿತಿಯ ಅಧ್ಯಕ್ಷರೂ ಆಗಿರುವ ನ್ಯಾ| ಮದನ್ ಬಿ. ಲೋಕುರ್ ಅಭಿಪ್ರಾಯಪಟ್ಟಿದ್ದಾರೆ. ಸಾಕ್ಷ್ಯಗಳ ಆಧಾರದಲ್ಲೇ ತೀರ್ಪು ನೀಡಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.