ಭಾರತಕ್ಕೆ ರಫೇಲ್‌: ಸರಣಿಯ ಮೊದಲ ಯುದ್ಧ ವಿಮಾನ ಹಸ್ತಾಂತರ

ವಿಮಾನಕ್ಕೆ ರಾಜನಾಥ್‌ರಿಂದ ಆಯುಧ ಪೂಜೆ

Team Udayavani, Oct 9, 2019, 4:10 AM IST

ಫ್ರಾನ್ಸ್‌ನ ಮೆರಿಗ್ನಾಕ್‌ನಲ್ಲಿ ರಫೇಲ್‌ ಯುದ್ಧ ವಿಮಾನವನ್ನು ಭಾರತಕ್ಕೆ ಹಸ್ತಾಂತರಿಸಿದ ಬಳಿಕ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಆಯುಧ ಪೂಜೆ ನೆರವೇರಿಸಿದರು.

ಹೊಸದಿಲ್ಲಿ: ಭಾರತೀಯ ವಾಯುಪಡೆಗೆ ಹೊಸ ಶಕ್ತಿ ತುಂಬಲು ಫ್ರಾನ್ಸ್‌ನಿಂದ ಪಡೆಯುತ್ತಿರುವ ರಫೇಲ್‌ ಯುದ್ಧ ವಿಮಾನ ಸರಣಿಯ ಮೊದಲ ವಿಮಾನವು ಮಂಗಳವಾರ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರಗೊಂಡಿದೆ.

ಫ್ರಾನ್ಸ್‌ನ ನೈಋತ್ಯ ಭಾಗದಲ್ಲಿರುವ ಮೆರಿಗ್ನಾಕ್‌ನಲ್ಲಿರುವ ರಫೇಲ್‌ ನಿರ್ಮಾತೃ ಕಂಪೆನಿಯಾದ ಡಸಾಲ್ಟ್ ಕಂಪೆನಿಯ ನೆಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಂಪೆನಿಯ ಸಿಇಒ ಎರಿಕ್‌ ಟ್ರಾಪ್ಪಿಯರ್‌ ಹಾಗೂ ಇನ್ನಿತರ ಅಧಿಕಾರಿಗಳು ಸಿಂಗ್‌ ಅವರಿಗೆ ರಫೇಲ್‌ ಅನ್ನು ಹಸ್ತಾಂತರಿಸಿದರು. ಫ್ರಾನ್ಸ್‌ನ ರಕ್ಷಣಾ ಸಚಿವ ಫ್ಲಾರೆನ್ಸ್‌ ಪಾರ್ಲೆ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಆಯುಧ ಪೂಜೆ
ಯುದ್ಧ ವಿಮಾನ ಹಸ್ತಾಂತರಗೊಂಡ ತರುವಾಯ, ಅದಕ್ಕೆ “ಆಯುಧ ಪೂಜೆ’ ನೆರವೇರಿಸಲಾಯಿತು. ಸಾಂಪ್ರ ದಾಯಿಕ ವಾಗಿ ವಿಮಾನಕ್ಕೆ ತಿಲಕವಿಟ್ಟ ಸಿಂಗ್‌, ಅದಕ್ಕೆ ಹೂಹಾರ ಹಾಕಿ, ಪೂಜೆ ಸಲ್ಲಿಸಿ ತೆಂಗಿನ ಕಾಯಿ ಒಡೆ ದರು. ಅವರಿಗೆ ಭಾರತೀಯ ಸೇನಾ ದಳಗಳ ಪ್ರತಿನಿಧಿಗಳು ಸಾಥ್‌ ನೀಡಿದರು.

ಶಕ್ತಿ ಹೆಚ್ಚಿಸಿದ ರಫೇಲ್‌
ಹಸ್ತಾಂತರ, ಪೂಜೆಗಳ ಬಳಿಕ ಮಾತ ನಾಡಿದ ಸಿಂಗ್‌, “ಇಂದು ವಿಜಯ ದಶಮಿ. ದುಷ್ಟರನ್ನು ದುರ್ಗೆ ಸಂಹಾರ ಮಾಡಿದ್ದಕ್ಕೆ ವಿಜಯೋತ್ಸವ ಆಚರಿಸುವ ದಿನ. ಇದೇ ದಿನದಂದೇ ಈ ವರ್ಷದ ಐಎಎಫ್ನ 87ನೇ ಸಂಸ್ಥಾಪನ ದಿನ ಆಚರಿಸಲ್ಪಡುತ್ತಿದೆ. ಇಂಥ ವಿಶೇಷ ಗಳುಳ್ಳ ದಿನದಂದು, ವಿಶ್ವದ 4ನೇ ಅತೀ ದೊಡ್ಡ ವಾಯುಪಡೆ ಯಾದ ಐಎಎಫ್ಗೆ ರಫೇಲ್‌ ಸೇರ್ಪಡೆ  ಯಾಗು ತ್ತಿರು ವುದು ಭಾರತದ ಸೇನಾ ಬಲವನ್ನು ಮತ್ತಷ್ಟು ಹೆಚ್ಚಿಸು ವಂತೆ ಮಾಡಿದೆ’ ಎಂದರು.

ಬಿರುಗಾಳಿಯಾಗಲಿ…
“ಫ್ರೆಂಚ್‌ ಭಾಷೆಯಲ್ಲಿ ರಫೇಲ್‌ ಎಂದರೆ ಬಿರುಗಾಳಿ ಎಂದರ್ಥ ಎಂದು ಕೇಳಿದ್ದೇನೆ. ಭಾರತಕ್ಕೆ ಸೇರ್ಪಡೆಗೊಂಡ ಅನಂತರ, ಈ ವಿಮಾನ ತನ್ನ ಹೆಸರನ್ನು ಸಾರ್ಥಕಪಡಿಸಿಕೊಳ್ಳುತ್ತದೆ ಎಂಬ ಭಾವನೆ ನನ್ನದು’ ಎಂದು ಸಿಂಗ್‌ ಅಭಿಪ್ರಾಯಪಟ್ಟರು.

ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿ
ರಫೇಲ್‌ ಹಸ್ತಾಂತರವು, ಭಾರ ತೀಯ ರಕ್ಷಣಾ ಪಡೆಗಳ ಇತಿಹಾಸ ದಲ್ಲೇ ಐತಿಹಾಸಿಕ ಹಾಗೂ ಮಹತ್ವದ ದಿನ ಎಂದ ಸಿಂಗ್‌, ರಫೇಲ್‌ ಖರೀದಿ ಪ್ರಕ್ರಿಯೆಯು ಭಾರತ ಮತ್ತು ಫ್ರಾನ್ಸ್‌ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ ಎಂದು ಹೇಳಿದರು.

ಐಎಎಫ್ ಮುಖ್ಯಸ್ಥರಿಗೆ ಗೌರವ
ರಫೇಲ್‌ ಯುದ್ಧ ವಿಮಾನಗಳ ಖರೀದಿಯಲ್ಲಿ ಭಾರತೀಯ ವಾಯುಪಡೆ (ಐಎಎಫ್) ಹಾಲಿ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ರಾಕೇಶ್‌ ಭದೌರಿಯಾ ಅವರ ಪಾತ್ರ ಹಿರಿದು. ಈ ಹಿಂದೆ ಅವರು ಐಎಎಫ್ ಉಪ ಮುಖ್ಯಸ್ಥರಾಗಿದ್ದಾಗಲೇ ರಫೇಲ್‌ ಖರೀದಿ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹಾಗಾಗಿ ಭಾರತಕ್ಕೆ ಹಸ್ತಾಂತರವಾಗಿರುವ ರಫೇಲ್‌ ಯುದ್ಧ ವಿಮಾನಕ್ಕೆ ರಾಕೇಶ್‌ ಭದೌರಿಯಾರ ಗೌರವಪೂರ್ವಕವಾಗಿ ಆರ್‌ಬಿ 001 ರಫೇಲ್‌ ಎಂದು ಹೆಸರಿಡಲಾಗಿದೆ.

2022ಕ್ಕೆ ಸಂಪೂರ್ಣ ರಫೇಲ್‌ ಶಕ್ತಿ
ಅಂದಾಜು 59,000 ಕೋಟಿ ರೂ. ವೆಚ್ಚದಲ್ಲಿ ಭಾರತಕ್ಕೆ ಒಟ್ಟು 36 ರಫೇಲ್‌ ಯುದ್ಧ ವಿಮಾನಗಳನ್ನು ಡಸಾಲ್ಟ್ ಕಂಪೆನಿ ತಯಾರಿಸಿ ಕೊಡಲಿದ್ದು, ಅದರ ಮೊದಲ ವಿಮಾನ ಮಂಗಳವಾರ ಭಾರತಕ್ಕೆ ಸೇರ್ಪಡೆ ಗೊಂಡಂತಾ ಗಿದೆ. ಮೊದಲ ಹಂತದಲ್ಲಿ 4 ವಿಮಾನ ಗಳು ಮುಂದಿನ ಮೇ ಒಳಗೆ ಭಾರತಕ್ಕೆ ಬರಲಿವೆ. ಇನ್ನುಳಿದ ವಿಮಾನ ಗಳು 2022ರ ಸೆಪ್ಟಂಬರ್‌ ಒಳಗೆ ಐಎಎಫ್ ಸೇರಿಕೊಳ್ಳಲಿವೆ. ಮೇಕ್‌ ಇನ್‌ ಇಂಡಿಯಾ ಅಡಿ ಯಲ್ಲಿ ಉಳಿದ ರಫೇಲ್‌ಗ‌ಳು ರೂಪುಗೊಳ್ಳಲಿವೆ.

ಫ್ರಾನ್ಸ್‌ ಅಧ್ಯಕ್ಷರ ಜತೆ ಮಾತುಕತೆ
ರಫೇಲ್‌ ಯುದ್ಧ ವಿಮಾನ ಹಸ್ತಾಂತರ ಸಮಾರಂಭಕ್ಕೂ ಮುನ್ನ ಪ್ಯಾರಿಸ್‌ನಲ್ಲಿ ರಾಜನಾಥ್‌ ಸಿಂಗ್‌, ಫ್ರಾನ್ಸ್‌ ಅಧ್ಯಕ್ಷ ಎಮ್ಯಾನ್ಯುಯೆಲ್‌ ಮ್ಯಾಕ್ರನ್‌ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧಗಳ ಕುರಿತಂತೆ ಮಾತುಕತೆ ನಡೆಸಿದರು. ಮೆರಿಗ್ನಾಕ್‌ನಲ್ಲಿ ರಫೇಲ್‌ ಹಸ್ತಾಂತರಕ್ಕೂ ಮುನ್ನ ಆ ನಗರದಲ್ಲಿರುವ ಡಸಾಲ್ಟ್ ಕಂಪೆನಿಯ ಕಾರ್ಖಾನೆಯ ಕಾರ್ಯವಿಧಾನವನ್ನು ಸಿಂಗ್‌ ವೀಕ್ಷಿಸಿದರು.

ಡಿಫೆನ್ಸ್‌ ಎಕ್ಸ್‌ಪೋಗೆ ಆಹ್ವಾನ
ಬುಧವಾರ ಫ್ರಾನ್ಸ್‌ ರಕ್ಷಣಾ ಸಾಮಗ್ರಿಗಳ ತಯಾರಿಕಾ ಕಂಪೆನಿಗಳ ಪ್ರತಿನಿಧಿಗಳ ಸಮ್ಮೇಳನವನ್ನು ಉದ್ದೇಶಿಸಿ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಮಾತನಾಡಲಿದ್ದಾರೆ. ಈ ಸಂದರ್ಭ ಅವರು ಮುಂದಿನ ವರ್ಷ ಫೆ. 5ರಿಂದ 8ರ ವರೆಗೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆಯಲಿರುವ ಡಿಫೆನ್ಸ್‌ ಎಕ್ಸ್‌ಪೋದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಿದ್ದಾರೆ.

59,000 ಕೋಟಿ ರೂ. ಅಂದಾಜು ವೆಚ್ಚ
36 ಭಾರತಕ್ಕೆ ಬರಲಿರುವ ರಫೇಲ್‌ ಯುದ್ಧ ವಿಮಾನಗಳು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ