ಅಧ್ಯಕ್ಷೀಯ ಮಾದರಿ ವ್ಯವಸ್ಥೆಯತ್ತ ಭಾರತ !

Team Udayavani, May 24, 2019, 6:05 AM IST

ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಕೈಗೊಂಡ ಪ್ರಚಾರ ದೇಶದ ಆಡಳಿತ ಸಂಸದೀಯ ವ್ಯವಸ್ಥೆಯಿಂದ ಅಧ್ಯಕ್ಷೀಯ ಮಾದರಿಯತ್ತ ವಾಲುತ್ತಿರುವಂತೆ ಭಾಸವಾಗಿದ್ದು ಸುಳ್ಳಲ್ಲ. ಚುನಾವಣ ಫ‌ಲಿತಾಂಶವನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದೇ ಆದಲ್ಲಿ ಇದು ಯಾವುದೇ ಒಂದು ಪಕ್ಷ ಅಥವಾ ಮೈತ್ರಿಕೂಟದ ಗೆಲುವಾಗಿರದೇ ನರೇಂದ್ರ ಮೋದಿ ಅವರ ವೈಯಕ್ತಿಕ ಗೆಲುವು ಎಂದು ವಿಶ್ಲೇಷಿಸಿದರೆ ಅದು ಉತ್ಪ್ರೇಕ್ಷೆಯಂತೂ ಆಗಲಾರದು. ದೇಶದ ಮತದಾರರು ತಮ್ಮ ಹಕ್ಕು ಚಲಾವಣೆಯ ಸಂದರ್ಭದಲ್ಲಿ ಸ್ಥಳೀಯ ವಿಷಯಗಳಿಗಿಂತ ಹೆಚ್ಚಾಗಿ ರಾಷ್ಟ್ರೀಯ ನಾಯಕತ್ವದ ಬಗೆಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂಬುದನ್ನು ಈ ಫ‌ಲಿತಾಂಶ ಸ್ಪಷ್ಟಪಡಿಸುತ್ತದೆ.

ನಾಯಕತ್ವ ಕೇಂದ್ರಿತ ರಾಜಕಾರಣ
ನಾಯಕತ್ವ ಕೇಂದ್ರಿತ ರಾಜಕಾರಣ ದೇಶಕ್ಕೆ ಹೊಸದೇನಲ್ಲ. 1970ರ ದಶಕದಲ್ಲಿ ಇಂದಿರಾ ಗಾಂಧಿ ಕಾಲದಲ್ಲಿ ಇಂಥ ರಾಜಕಾರಣವನ್ನು ಕಾಣಬಹುದಾಗಿತ್ತು. “ಗರೀಬಿ ಹಟಾವೋ’ ಘೋಷಣೆಯೊಂದೇ ಇಂದಿರಾ ಗಾಂಧಿ ಅವರನ್ನು ದೇಶ ಮಾತ್ರವಲ್ಲದೆ ವಿಶ್ವ ನಾಯಕಿಯಾಗಿ ರೂಪಿಸಿತ್ತು. ಆದರೆ ಇಂದಿರಾ ಬಳಿಕ ಇಷ್ಟು ವರ್ಚಸ್ಸಿನ ನಾಯಕರು ಕಾಂಗ್ರೆಸ್‌ನಲ್ಲಿ ಇರಲಿಲ್ಲ.

ಮೋದಿ ಮೋಡಿ
ಗುಜರಾತ್‌ನಲ್ಲಿ ಸರಿ ಸುಮಾರು 13 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಅನುಭವವನ್ನು ಪಡೆದಿದ್ದ ನರೇಂದ್ರ ಮೋದಿ ಅವರನ್ನು 2014ರಲ್ಲಿ ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿ ಅವರ ನಾಯಕತ್ವದಲ್ಲಿಯೇ ಚುನಾವಣೆಯನ್ನು ಎದುರಿಸಿತ್ತು. ಆಗ ಸಂಸದರ ಆಯ್ಕೆಗಿಂತ ಮೋದಿ ನಾಯಕತ್ವವನ್ನೇ ಬಿಜೆಪಿ ಮುನ್ನೆಲೆಗೆ ತಂದಿತ್ತು. ಆಗ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರಲು ಮೋದಿ ಅವರ ನಾಯಕತ್ವದ ಜತೆಗೆ ಆಗಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯೂ ಸಹಕಾರಿಯಾಗಿತ್ತು ಎಂಬುದನ್ನು ಅಲ್ಲಗಳೆಯಲಾಗದು.

ಮೋದಿ ಜನಪ್ರಿಯತೆಯೇ ಮುಖ್ಯವಾಯ್ತು
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಒಂದು ಪಕ್ಷವಾಗಿ ಚುನಾವಣೆಯನ್ನು ಎದುರಿಸಿತು ಎನ್ನುವುದಕ್ಕಿಂತ ನರೇಂದ್ರ ಮೋದಿ ಅವರ ಜನಪ್ರಿಯತೆಯನ್ನು ಪರೀಕ್ಷೆಗೊಡ್ಡಿತು. ಪಕ್ಷದ ಬಹುತೇಕ ಅಭ್ಯರ್ಥಿಗಳು ಮೋದಿ ಅವರ ಹೆಸರಿನಲ್ಲಿಯೇ ಮತ ಯಾಚಿಸುವ ಮೂಲಕ ಲೋಕಸಭೆಯನ್ನು ಪ್ರವೇಶಿಸುವಲ್ಲಿ ಯಶಸ್ವಿಯೂ ಆದರು. ಇಡೀ ಚುನಾವಣೆಯನ್ನು ಮೋದಿ ಅವರು ತಮ್ಮ ಬಗೆಗಿನ ಜನಾದೇಶವನ್ನಾಗಿ ಪರಿವರ್ತಿಸಿ ಅದರಲ್ಲಿ ಸಫ‌ಲತೆಯನ್ನೂ ಕಂಡರು. ಅಧ್ಯಕ್ಷೀಯ ಮಾದರಿಯಲ್ಲಿಯೇ ಮೋದಿ ಈ ಬಾರಿಯ ಚುನಾವಣೆಯನ್ನು ಎದುರಿಸಿ ಜಯಶಾಲಿಯಾದರು ಮಾತ್ರವಲ್ಲದೆ ಸೋಲುವ ಭೀತಿಯಲ್ಲಿದ್ದ ಪಕ್ಷದ ಹಲವು ಸಂಸದರನ್ನು ದಡ ಸೇರಿಸಿದರು.

ಒಟ್ಟಾರೆ ಈ ಬಾರಿಯ ಲೋಕಸಭೆ ಚುನಾವಣೆ ಸಂಪೂರ್ಣವಾಗಿ ನರೇಂದ್ರ ಮೋದಿ ಕೇಂದ್ರಿತವಾಗಿ ನಡೆಯಿತು ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಪಕ್ಷ ಪಾಳಯದಲ್ಲಿ ಪ್ರಬಲ ನಾಯಕತ್ವದ ಕೊರತೆ ಮೋದಿ ಅವರ ವರ್ಚಸ್ಸಿಗೆ ಮತ್ತಷ್ಟು ಬಲ ತುಂಬಿತು.

ಏನಿದು ಅಧ್ಯಕ್ಷೀಯ ಮಾದರಿ?
ಪ್ರಜಾಪ್ರಭುತ್ವದಲ್ಲಿ ಎರಡು ಮಾದರಿಯ ಆಡಳಿತ ವ್ಯವಸ್ಥೆಗಳಿವೆ. ಒಂದು ಅಧ್ಯಕ್ಷೀಯ ಮಾದರಿಯಾದರೆ ಇನ್ನೊಂದು ಸಂಸದೀಯ ವ್ಯವಸ್ಥೆ. ಅಧ್ಯಕ್ಷೀಯ ಮಾದರಿಯಲ್ಲಿ ರಾಷ್ಟ್ರಾಧ್ಯಕ್ಷರು ನೇರವಾಗಿ ಜನರಿಂದ ಅಥವಾ ಅಧ್ಯಕ್ಷರ ಆಯ್ಕೆಗಾಗಿಯೇ ಜನರಿಂದ ಆಯ್ಕೆಯಾದ ಮಂಡಳಿಯಿಂದ ಚುನಾಯಿತರಾಗುತ್ತಾರೆ. ದೇಶದ ಆಡಳಿತದಲ್ಲಿ ಅಧ್ಯಕ್ಷರದೇ ಅಂತಿಮ ನಿರ್ಧಾರ. ಇನ್ನು ಸಂಸದೀಯ ವ್ಯವಸ್ಥೆಯಲ್ಲಿ ಆಡಳಿತ ಚುಕ್ಕಾಣಿ ಸಂಪೂರ್ಣ ಪ್ರಧಾನ ಮಂತ್ರಿಯದಾಗಿದೆ. ಸಂಸತ್‌ನಲ್ಲಿ ಬಹುಮತ ಪಡೆದ ಪಕ್ಷದ ಸಂಸದರು ಆಯ್ಕೆ ಮಾಡಿದ ನಾಯಕನನ್ನು ರಾಷ್ಟ್ರಪತಿಯವರು ಪ್ರಧಾನಿಯಾಗಿ ನೇಮಕ ಮಾಡುತ್ತಾರೆ. ಈ ವ್ಯವಸ್ಥೆಯಲ್ಲಿ ರಾಷ್ಟ್ರಾಧ್ಯಕ್ಷ ಅಥವಾ ರಾಷ್ಟ್ರಪತಿ ಹುದ್ದೆ ಕೇವಲ ಸಾಂವಿಧಾನಿಕ ಮಾನ್ಯತೆ ಹೊಂದಿರುತ್ತದೆ. ಈ ವ್ಯವಸ್ಥೆಯಲ್ಲಿ ಪ್ರಧಾನಿ ಉತ್ತರದಾಯಿಯಾಗಿರುತ್ತಾರೆ.

  • ಹರೀಶ್‌ ಕೊಕ್ಕಡ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ