ಚೀನದ ಹಡಗನ್ನು ಹಿಮ್ಮೆಟ್ಟಿಸಿದ್ದ ನೌಕಾಪಡೆ ; ಅತಿಕ್ರಮಣ, ಬೇಹುಗಾರಿಕೆ ಯತ್ನ ವಿಫ‌ಲ

Team Udayavani, Dec 4, 2019, 12:58 AM IST

ಹೊಸದಿಲ್ಲಿ: ಅಂಡಮಾನ್‌ ಸಮುದ್ರದಲ್ಲಿರುವ ಭಾರತದ ವಿಶೇಷ ಆರ್ಥಿಕ ವಲಯದೊಳಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಚೀನದ ನೌಕೆಯೊಂದನ್ನು ಹಿಮ್ಮೆಟ್ಟಿಸಲಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಕರಂವೀರ್‌ ಸಿಂಗ್‌ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದಿದ್ದ ಈ ಘಟನೆಯನ್ನು ಮಂಗಳವಾರ ನೌಕಾಪಡೆ ಬಹಿರಂಗಪಡಿಸಿದೆ. ಚೀನದ ಶಿ ಯಾನ್‌ 1 ಎಂಬ ಹೆಸರಿನ ನೌಕೆಯು ಸೆಪ್ಟೆಂಬರ್‌ ತಿಂಗಳಲ್ಲಿ ತನ್ನ ಸಮುದ್ರ ಗಡಿ ದಾಟಿ ಬಂದಿದ್ದಲ್ಲದೆ, ಭಾರತದ ಆರ್ಥಿಕ ವಲಯದೊಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಬೇಹುಗಾರಿಕೆ ನಡೆಸಲು ಯತ್ನಿಸಿತ್ತು. ಕೂಡಲೇ ಎಚ್ಚರಿಕೆ ನೀಡಿ ಆ ನೌಕೆಯನ್ನು ವಾಪಸ್‌ ಕಳುಹಿಸಲಾಯಿತು ಎಂದು ಸಿಂಗ್‌ ಹೇಳಿದ್ದಾರೆ.

ಇದೇ ವೇಳೆ, ಹಿಂದೂ ಮಹಾಸಾಗರದಲ್ಲಿ ಚೀನ ನೌಕಾ ಹಡಗುಗಳ ಬೇಹುಗಾರಿಕೆ ಪ್ರಕರಣಗಳು ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗಿದೆ. ಆದರೆ, ಭಾರತೀಯ ನೌಕಾ ಪಡೆಯು ಅಂಥ ದುಸ್ಸಾಹಸಗಳ ಬಗ್ಗೆ ಸೂಕ್ತ ನಿಗಾ ವಹಿಸಿದೆ ಎಂದು ಬಂಗಾಲ ವಲಯದ ನೌಕಾ ಅಧಿಕಾರಿ ಕಮಾಂಡರ್‌ ಸುಪ್ರೊಭೋ ಡೇ ತಿಳಿಸಿದ್ದಾರೆ.

ನೌಕಾಪಡೆಗೆ ಅನುದಾನ ಹೆಚ್ಚಿಸಲು ಆಗ್ರಹ: ಕೇಂದ್ರ ಸರಕಾರದ ಬಜೆಟ್‌ನಲ್ಲಿ ನೌಕಾಪಡೆಗೆ ನೀಡಲಾಗುವ ಅನುದಾನದಲ್ಲಿ ಮಾಡಲಾಗಿರುವ ಕಡಿತವನ್ನು ಪುನಃ ಹೆಚ್ಚಿಸುವಂತೆ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌ ಆಗ್ರಹಿಸಿದ್ದಾರೆ. ನೌಕಾಪಡೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2012-13ರಲ್ಲಿ ಶೇ.18ರಷ್ಟು ನೀಡಲಾಗಿದ್ದು, 2019-20ರ ಬಜೆಟ್‌ನಲ್ಲಿ ಶೇ. 13ಕ್ಕೆ ಇಳಿಸಲಾಗಿದೆ. ಇದು ನೌಕಾಪಡೆಯ ಆಧುನೀಕರಣಕ್ಕೆ ಹಾಗೂ ನೆರೆರಾಷ್ಟ್ರಗಳು ಒಡ್ಡುವ ಸವಾಲುಗಳನ್ನು ಹಿಮ್ಮೆಟ್ಟಿಸಲು ಅಡ್ಡಗಾಲು ಹಾಕಿದಂತಾಗಿದೆ”ಎಂದಿದ್ದಾರೆ.

ಇದೇ ವೇಳೆ, ‘ಸ್ವದೇಶಿ ನಿರ್ಮಿತ ಮೂರು ವಿಮಾನ ವಾಹಕ ನೌಕೆ (ಐಎಸಿ)ಗಳನ್ನು ಹೊಂದುವುದು ನೌಕಾಪಡೆಯ ಬಹುದಿನಗಳ ಕನಸಾಗಿದ್ದು, ಅದು 2022ರ ಹೊತ್ತಿಗೆ ನನಸಾಗಲಿದೆ ಎಂದಿದ್ದಾರೆ. ಮೊದಲ ಐಎಸಿಯು 2022ರೊಳಗೆ ನೌಕಾಪಡೆಗೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದ್ದು, ಮಿಗ್‌-29ಕೆ ವಿಮಾನಗಳನ್ನು ಹೊತ್ತೊಯ್ಯಬಲ್ಲ ಛಾತಿಯನ್ನು ಅದು ಹೊಂದಿರಲಿದೆ ಎಂದಿದ್ದಾರೆ.

ನೌಕಾ ಕವಾಯತು: ಚೀನ ಹೊರಕ್ಕೆ
ಪ್ರಸಕ್ತ ಮಾಸಾಂತ್ಯದಲ್ಲಿ ಭಾರತವು ತನ್ನ 41 ಮಿತ್ರ ರಾಷ್ಟ್ರಗಳೊಂದಿಗೆ ನೌಕಾ ಕವಾಯತು ನಡೆಸಲಿದ್ದು, ಅದರಿಂದ ಚೀನವನ್ನು ಹೊರಗಿಟ್ಟಿದೆ. 41 ದೇಶಗಳಿಗೆ ಈಗಾಗಲೇ ಆಹ್ವಾನ ವನ್ನು ನೀಡಲಾಗಿದೆ. ಕೇವಲ ಸಮಾನ ಮನಸ್ಕ ರಾಷ್ಟ್ರಗಳು ಮಾತ್ರ ಇದರಲ್ಲಿ ಭಾಗಿಯಾಗಲಿವೆ ಎಂದು ನೌಕಾಪಡೆ ತಿಳಿಸಿದ್ದು, ಆ ಮೂಲಕ ಸಮಾನ ಮನಸ್ಕವಲ್ಲದ ಚೀನವನ್ನು ದೂರವಿಡಲಾಗಿದೆ ಎಂದು ಪರೋಕ್ಷವಾಗಿ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ