ಕರಾಬಿ ನೌಕಾದಳದ ಸಲಹೆಗಾರ್ತಿ ; ಕಾರವಾರದ ನೌಕಾ ನೆಲೆಯಲ್ಲಿ ಸದ್ಯ ಎಂಜಿನಿಯರ್‌

Team Udayavani, Nov 14, 2019, 6:40 AM IST

ಹೊಸದಿಲ್ಲಿ: ಕಾರವಾರದ ನೌಕಾ ನೆಲೆಯಲ್ಲಿ ಎಂಜಿನಿಯರ್‌ ಆಗಿರುವ ಲೆಫ್ಟಿನೆಂಟ್‌ ಕಮಾಂಡರ್‌ ಆಗಿರುವ ಕರಾಬಿ ಗೊಗೋಯ್‌ ಅವರನ್ನು ನೌಕಾಪಡೆಯ ಮೊದಲ ರಕ್ಷಣಾ ಸಲಹೆಗಾರ್ತಿ ಎಂದು ನೇಮಿಸಲಾಗಿದೆ. ಸೆಪ್ಟಂಬರ್‌ನಲ್ಲಿ ಭಾರತೀಯ ವಾಯುಪಡೆ (ಐಎಎಫ್) ಮಾಸ್ಕೋ ದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ವಿಂಗ್‌ ಕಮಾಂಡರ್‌ ಅಂಜಲಿ ಸಿಂಗ್‌ರನ್ನು ರಕ್ಷಣಾ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು.

ವರ್ಷಾಂತ್ಯದ ವೇಳೆಗೆ ಕರಾಬಿ ಗೊಗೋಯ್‌ ಎಲ್ಲಾ ವಿಭಾಗಗಳಿಂದ ಅನುಮೋದನೆ ಪಡೆದ ಬಳಿಕ ಅವರು ಮಾಸ್ಕೋಗೆ ತೆರಳಿ ಹೊಸ ಹುದ್ದೆ ನಿರ್ವಹಿಸಲಿದ್ದಾರೆ. ಅದಕ್ಕಿಂತ ಮೊದಲು ಅವರು ರಷ್ಯನ್‌ ಭಾಷೆ ಕಲಿಕೆಯನ್ನು ಪೂರ್ತಿ ಗೊಳಿಸಲಿದ್ದಾರೆ. ಅಸ್ಸಾಂನ ಗುವಾಹಟಿಯವರಾಗಿರುವ ಕರಾಬಿ, 2010ರಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡಿದ್ದರು. ಅವರ ಪತಿ ಲೆ.ಕ. ಪ್ರಾಂಜಲ್‌ ಹಾಂಡಿಕ್‌ ನೌಕಾಪಡೆಯಲ್ಲಿ ಅಧಿಕಾರಿಯಾಗಿದ್ದಾರೆ. ಹಿರಿಯ ಅಧಿಕಾರಿಗಳು ನಡೆಸಿದ ಸಂದರ್ಶನ ಮತ್ತು ಇತರ ಪ್ರಕ್ರಿಯೆಯಗಳಲ್ಲಿ ತೇರ್ಗಡೆ ಹೊಂದಿದ ಬಳಿಕ ಗೊಗೋಯ್‌ರನ್ನು ಹೊಸ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ನೌಕಾಪಡೆಯಲ್ಲಿ ಗೊಗೋಯ್‌ ಹೊಂದಿರುವ ಲೆಫ್ಟಿನೆಂಟ್‌ ಕಮಾಂಡರ್‌ ಭೂಸೇನೆಯ ಮೇಜರ್‌ ಶ್ರೇಣಿಗೆ ಸಮನಾಗಿದೆ. ಅಮೆರಿಕ, ಯುನೈಟೆಡ್‌ ಕಿಂಗ್‌ಡಮ್‌ ಮತ್ತು ರಷ್ಯಾಗಳಲ್ಲಿರುವ ಭಾರತದ ರಾಯಭಾರ ಕಚೇರಿಗಳಲ್ಲಿ 100ಕ್ಕೂ ಹೆಚ್ಚು ರಕ್ಷಣಾ ಸಲಹೆಗಾರರು ಇದ್ದಾರೆ. ಈ ಹುದ್ದೆಗಳಲ್ಲಿರುವವರು ಆತಿಥೇಯ ರಾಷ್ಟ್ರಗಳ ಸೇನೆಯ ಪ್ರಮುಖ ವಿಭಾಗಗಳ ಜತೆಗೆ ಭದ್ರತೆ, ಮಿಲಿಟರಿ ತಂತ್ರಜ್ಞಾನ ಮತ್ತು ಶಿಷ್ಟಾಚಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ, ಅಧ್ಯಯನ ನಡೆಸುತ್ತಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ