ಆಮ್‌ ಆದ್ಮಿ ಪಕ್ಷ ಇಬ್ಟಾಗ ? ಪಕ್ಷ ತೊರೆಯುವುದಾಗಿ ಕುಮಾರ್‌ ವಿಶ್ವಾಸ್

Team Udayavani, May 3, 2017, 12:20 PM IST

ಹೊಸದಿಲ್ಲಿ : ದಿಲ್ಲಿಯಲ್ಲಿ ಆಡಳಿತ ರೂಢವಾಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಇದೀಗ ಎರಡು ಹೋಳಾಗುವತ್ತ ಸಾಗಿದೆ. 

ಕೇಜ್ರಿವಾಲ್‌ ಅವರ ಸರ್ವಾಧಿಕಾರಿ ಪ್ರವೃತ್ತಿಯ ನಾಯಕತ್ವಕ್ಕೆ ಸಡ್ಡು ಹೊಡೆದಿರುವ ಪಕ್ಷದ ಯುವ ನಾಯಕ ಕುಮಾರ್‌ ವಿಶ್ವಾಸ್‌ ಅವರು ತಾನು ಪಕ್ಷವನ್ನು ತೊರೆಯುವುದಾಗಿ ಹೇಳಿದ್ದಾರೆ.

ಆಮ್‌ ಆದ್ಮಿ ಪಕ್ಷ ಮೊದಲಲ್ಲಿ ಎಲ್ಲ ಗೊಂದಲ, ಅರಾಜಕತೆಗೆ ಕುಮಾರ್‌ ವಿಶ್ವಾಸ್‌  ಅವರೇ ಕಾರಣರೆಂದು ದೂರಿ ಅವರ ಮೇಲೆ ಗೂಬೆ ಕೂರಿಸಲು ಮುಂದಾಗಿತ್ತು. ಆದರೆ ವಿಶ್ವಾಸ್‌ ಅವರಿಗೆ ಅಧಿಕ ಸಂಖ್ಯೆಯ ಆಪ್‌ ಶಾಸಕರ ಬೆಂಬಲ ಇರುವುದನ್ನು ಮನಗಂಡು ತನ್ನ ಕೋಪಾವೇಶವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿತು.

ನಿನ್ನೆ ರಾತ್ರಿಯೇ ಅರವಿಂದ ಕೇಜ್ರಿವಾಲ್‌ ಮತ್ತು ಮನೀಶ್‌ ಸಿಸೋಡಿಯಾ ಅವರು ಕುಮಾರ್‌ ವಿಶ್ವಾಸ್‌ ಅವರೊಡನೆ ಮಾತುಕತೆ ನಡೆಸಿದ್ದರು. ಆದರೆ ಇಂದು ಬೆಳಗ್ಗೆ ಆಪ್‌ ಶಾಸಕರ ಒಂದು ದೊಡ್ಡ ಗುಂಪು ಕುಮಾರ್‌ ವಿಶ್ವಾಸ್‌ ನೇತೃತ್ವದಲ್ಲಿ ಪ್ರತ್ಯೇಕ ಸಭೆಯೊಂದನ್ನು ನಡೆಸಿತು. ಒಂದು ಲೆಕ್ಕಾಚಾರದ ಪ್ರಕಾರ ಕುಮಾರ್‌ ವಿಶ್ವಾಸ್‌ಗೆ 35 ಆಪ್‌ ಶಾಸಕರ ಬೆಂಬಲವಿದ್ದು ವಿಶ್ವಾಸ್‌ ಅವರೇ ದಿಲ್ಲಿ ಮುಖ್ಯಮಂತ್ರಿಯಾಗುವುದನ್ನು ಬಯಸುತ್ತಾರೆ ಎನ್ನಲಾಗಿದೆ. 

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ಆಪ್‌ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯು ಸಭೆ ಸೇರಿ ಪಕ್ಷದೊಳಗಿನ ಬಿಕ್ಕಟ್ಟು, ಹಾಲಿ ನಾಯಕತ್ವಕ್ಕೆ ಒದಗಿರುವ ಸವಾಲು, ಬಿಕ್ಕಟ್ಟು ಶಮನದ ಮಾರ್ಗೋಪಾಯ ಇತ್ಯಾದಿಗಳನ್ನು ಚರ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ