‘ನಾವಿಕ’ ಶೀಘ್ರ ನನಸು: ಅಮೆರಿಕದ ಜಿಪಿಎಸ್ಗೆ ಸಡ್ಡು
Team Udayavani, Aug 5, 2017, 8:10 AM IST
ಹೊಸದಿಲ್ಲಿ: ಅಮೆರಿಕದ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ದಿಕ್ಸೂಚಿ ವ್ಯವಸ್ಥೆಗೆ ಸಡ್ಡು ಹೊಡೆಯುವ ಸಂಪೂರ್ಣ ಸ್ವದೇಶಿ ವ್ಯವಸ್ಥೆ ‘ನಾವಿಕ’ ಶೀಘ್ರದಲ್ಲಿ ನನಸಾಗಲಿದೆ. ಈ ಸಂಬಂಧ ಇಸ್ರೋ ಮತ್ತು ಐಸ್ಟ್ರಾಕ್ ಮತ್ತು ಎನ್ಪಿಎಲ್ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸಹಿ ಹಾಕಿದ್ದು, ಸ್ವದೇಶಿ ನಿರ್ಮಿತ ಪರಮಾಣು ಗಡಿಯಾರಗಳನ್ನು ಬಳಸಲಿವೆ. ಇದರಿಂದ ಅಮೆರಿಕದ ಜಿಪಿಎಸ್ ವ್ಯವಸ್ಥೆ ಸೇರಿ ಪರಮಾಣು ಗಡಿಯಾರಗಳ ಅವಲಂಬನೆ ತಪ್ಪಲಿದೆ.
ದಿಕ್ಸೂಚಿ ವ್ಯವಸ್ಥೆ ಮತ್ತು ಅದಕ್ಕಿರುವ ಪರಮಾಣು ಗಡಿಯಾರಗಳು ಅತ್ಯಂತ ಮಹತ್ವದ್ದಾಗಿದೆ. ಜಿಪಿಎಸ್ ವ್ಯವಸ್ಥೆಗೆ ಪರ್ಯಾಯ ನಾವಿಕ ವ್ಯವಸ್ಥೆಯನ್ನು (7 ಐಆರ್ಎನ್ಎಸ್ ಉಪಗ್ರಹಗಳು ಈಗಾಗಲೇ ಉಡಾವಣೆಯಾಗಿದೆ) ಸ್ಥಾಪಿಸಲಾಗಿದ್ದು ರಕ್ಷಣಾ ಪಡೆಗಳು ಮತ್ತು ದೇಶದ ಪ್ರಜೆಗಳಿಗೆ ಲಭ್ಯವಾಗಲಿದೆ. ನಾವಿಕ ವ್ಯವಸ್ಥೆ ನೀಡುವಲ್ಲಿ ನ್ಯಾನೋ ಸೆಕೆಂಡ್ಗಳಷ್ಟು ನಿಖರತೆಯನ್ನು ಇಸ್ರೋ ಬಯಸುತ್ತದೆ. ಇದಕ್ಕಾಗಿ ದೇಶದ ಅಧಿಕೃತ ಸಮಯವನ್ನು ನಿರ್ವಹಿಸುವ ಎನ್ಪಿಎಲ್ ಜೊತೆ ಸಹಿ ಹಾಕಿದೆ.