ಈ ವರ್ಷ ಜಲ್ಲಿಕಟ್ಟು ನಡೆಯುವುದು ಖಚಿತ, ಹಿಂದಡಿ ಇಲ್ಲ: ಪನ್ನೀರಸೆಲ್ವಂ
Team Udayavani, Jan 11, 2017, 3:12 PM IST
ಚೆನ್ನೈ : ರಾಜ್ಯದಲ್ಲಿ ಈ ವರ್ಷ ಜಲ್ಲಿಕಟ್ಟು ಕ್ರೀಡೋತ್ಸವ ನಡೆದೇ ತೀರುತ್ತದೆ; ಈ ವಿಷಯದಲ್ಲಿ ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಹೇಳಿದ್ದಾರೆ.
“ಜಲ್ಲಿಕಟ್ಟು ಕ್ರೀಡೋತ್ಸವ ತಮಿಳು ನಾಡಿನಲ್ಲಿ ನಡೆದೇ ತೀರುತ್ತದೆ; ಈ ಕ್ರೀಡೆಯನ್ನು ಪುನರಾರಂಭಿಸುವ ಯತ್ನಗಳನ್ನು ತಮಿಳು ನಾಡು ಸರಕಾರ ಕೈಬಿಡುವುದಿಲ್ಲ’ ಎಂದು ಪನ್ನೀರಸೆಲ್ವಂ ಅವರು ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಮೊನ್ನೆ ಸೋಮವಾರ ಪನ್ನೀರಸೆಲ್ವಂ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಪೊಂಗಲ್ ಸಂದರ್ಭದಲ್ಲಿ ನಡೆಸಲಾಗುವ ರಾಜ್ಯದ ಪ್ರಾಚೀನ ಮತ್ತು ಪಾರಂಪರಿಕ ಜಲ್ಲಿಕಟ್ಟು ಕ್ರೀಡೆಯನ್ನು ನಡೆಸುವುದಕ್ಕಾಗಿ ಅಧ್ಯಾದೇಶವನ್ನು ತರುವಂತೆ ಕೇಳಿಕೊಂಡಿದ್ದಾರೆ.
ಜಲ್ಲಿಕಟ್ಟು ಕ್ರೀಡೆಯು ಪೊಂಗಲ್ ಹಬ್ಬದ ಅವಿಭಾಜ್ಯ ಅಂಗವಾಗಿದ್ದು ತಮಿಳು ನಾಡಿನ ಜನರು ಇದಕ್ಕೆ ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ ಎಂದು ಪತ್ರದಲ್ಲಿ ಸೆಲ್ವಂ ಪ್ರಧಾನಿಗೆ ಮನವರಿಕೆ ಮಾಡಿದ್ದಾರೆ.