ಕಣಿವೆ ಕೊತ ಕೊತ

ಕಾಶ್ಮೀರದಲ್ಲಿನ ಬೆಳವಣಿಗೆ ಬಗ್ಗೆ ಕೇಂದ್ರದಿಂದ ಸ್ಪಷ್ಟನೆ ಕೇಳಿದ ಪ್ರತಿಪಕ್ಷಗಳು

Team Udayavani, Aug 4, 2019, 6:12 AM IST

ಶ್ರೀನಗರ/ನವದೆಹಲಿ: ದಿಢೀರನೇ ಹೆಚ್ಚುವರಿ ಸೇನೆ ನಿಯೋಜನೆಗೊಂಡಿದ್ದರಿಂದ ಭಯಭೀತರಾಗಿದ್ದ ಕಾಶ್ಮೀರ ಕಣಿವೆಯ ಜನ, ಅಮರನಾಥ ಯಾತ್ರೆ, ಮಚಿಲ್ ಯಾತ್ರೆಯ ರದ್ದತಿಯಿಂದಾಗಿ ಮತ್ತಷ್ಟು ಗೊಂದಲಕ್ಕೀಡಾಗಿದ್ದಾರೆ.

ಕೇಂದ್ರ ಸರ್ಕಾರ ಏಕೆ ಕಣಿವೆ ರಾಜ್ಯಕ್ಕೆ ಭಾರೀ ಪ್ರಮಾಣದ ಸೇನೆಯನ್ನು ಕಳುಹಿಸುತ್ತಿದೆ ಎಂಬ ಬಗ್ಗೆ ಯಾರಲ್ಲೂ ಮಾಹಿತಿ ಇಲ್ಲ. ಸ್ವತಃ ಸ್ಥಳೀಯ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್‌ ಮತ್ತು ಪಿಡಿಪಿ ಇಡೀ ಬೆಳವಣಿಗೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿವೆ. ಇನ್ನು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಮಾಡಿದ ಕಾಂಗ್ರೆಸ್‌ ನಾಯಕರು, ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಸುಖಾಸುಮ್ಮನೆ ಭೀತಿಯ ವಾತಾವರಣ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ, ಪ್ರಸಕ್ತ ಅಧಿವೇಶನದಲ್ಲೇ ಕೇಂದ್ರ ಸರ್ಕಾರ ಕಾಶ್ಮೀರ ವಿವಾದದ ಬಗ್ಗೆ ತಾರ್ಕಿಕ ಅಂತ್ಯವೊಂದನ್ನು ಕಾಣಿಸಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹೀಗಾಗಿಯೇ ಕೇಂದ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ಕಳಿಸುತ್ತಿದೆ, ಅಮರನಾಥ ಯಾತ್ರೆಯನ್ನೂ ರದ್ದು ಮಾಡಿದೆ ಎಂದು ರಾಜಕೀಯ ನೇತಾರರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ ಮಲಿಕ್‌, ಯಾವುದೇ ವದಂತಿಗಳಿಗೆ ಕಿವಿಗೊಟ್ಟು ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ ಎಂದು ಜನರಿಗೆ ಕರೆ ನೀಡಿದ್ದಾರೆ.

ಭದ್ರತಾ ಪಡೆಗಳು ಹೇಳ್ಳೋದೇನು?: ಜಮ್ಮು ಕಾಶ್ಮೀರದಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನ ಪ್ರಾಯೋಜಿತ ಉಗ್ರ ಸಂಘಟನೆಗಳು, ಸೋಪೋರ್‌ ಸೇರಿದಂತೆ ಕಾಶ್ಮೀರದ ಇನ್ನಿತರ ಪ್ರಾಂತ್ಯಗಳಲ್ಲಿ ಸುಧಾರಿತ ಸ್ಫೋಟಕಗಳನ್ನು ಉಪಯೋಗಿಸಿ ವ್ಯಾಪಕವಾಗಿ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದವು. ಅದರಲ್ಲೂ ಮುಖ್ಯವಾಗಿ ಜೈಷ್‌-ಎ-ಮೊಹಮ್ಮದ್‌ ಸಂಘಟನೆಯು ಸಾರ್ವಜನಿಕ ಸ್ಥಳಗಳ ಮೇಲಿನ ದಾಳಿಯ ಜತೆಗೆ, ಸೇನಾ ನೆಲೆಗಳ ಮೇಲೂ ದಾಳಿ ನಡೆಸಲು ಸಜ್ಜಾಗಿದ್ದವು. ಗುಪ್ತಚರ ಇಲಾಖೆಗೆ ಈ ವಿಚಾರ ತಿಳಿದಿದ್ದರಿಂದಲೇ ಕಣಿವೆ ರಾಜ್ಯದಲ್ಲಿ ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಈ ಬೆಳವಣಿಗೆಗಳ ಬಗ್ಗೆ ಖಚಿತ ಮಾಹಿತಿಯಿರುವ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ‘ಹಿಂದೂಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

ಪಿಒಕೆಗೆ ಅಜರ್‌ ಸಹೋದರ: ವಿಧ್ವಂಸಕ ಕೃತ್ಯಗಳಿಗಾಗಿ ಉಗ್ರರನ್ನು ಸಂಘಟಿಸುವ ಉದ್ದೇಶದಿಂದ ಜೈಶ್‌ ಎ ಮೊಹಮ್ಮದ್‌ ಸಂಸ್ಥಾಪಕ ಹಾಗೂ ಉಗ್ರ ಮಸೂದ್‌ ಅಜರ್‌ನ ಹಿರಿಯಣ್ಣ ಇಬ್ರಾಹಿಂ ಅಜರ್‌ ಇತ್ತೀಚೆಗೆ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಭೇಟಿ ನೀಡಿದ್ದು ಈ ವಿಚಾರ ಗುಪ್ತಚರ ಇಲಾಖೆಗೆ ಮುಟ್ಟಿತ್ತು. ಇವನು ಉಗ್ರರನ್ನು ಕಳುಹಿಸಿ ದಾಳಿ ಮಾಡಬಹುದು ಎಂಬುದನ್ನು ಅರಿತು ಈ ಮಟ್ಟದ ಭದ್ರತೆ ಆಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿಶ್ತವಾರ್‌ ಯಾತ್ರೆಯೂ ರದ್ದು: ಅಮರನಾಥ ಯಾತ್ರೆಯೊಂದಿಗೆ 43 ದಿನಗಳ ಕಾಲ ನಡೆಯುವ ಮಚಿಲ್ ಮಾತಾ ಯಾತ್ರಾವನ್ನೂ ನಿಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಕಿಶ್ತವಾರ್‌ನಲ್ಲಿರುವ ಮಾಚಿಲ್ ಎಂಬ ಹಳ್ಳಿಯಲ್ಲಿನ ದುರ್ಗಾ ದೇವಿಯ ದರುಶನಕ್ಕೆ ಹೋಗುವ ಯಾತ್ರೆಯಿದು.

ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಆದೇಶ ಹೊರಡಿಸಿರುವ ಸ್ಥಳೀಯಾಡಳಿತ ಮಚಿಲ್ ಯಾತ್ರೆಯ ಉದ್ದೇಶ ಹೊಂದಿರುವವರು ಆ ಯೋಜನೆ ಮುಂದೂಡುವಂತೆ ಹಾಗೂ ಈಗಾಗಲೇ ಯಾತ್ರೆಯಲ್ಲಿರುವ ಯಾತ್ರಿಕರು ಕೂಡಲೇ ತಮ್ಮ ಊರುಗಳಿಗೆ ಹಿಂದಿರಬೇಕು ಎಂದು ಸೂಚಿಸಿದೆ.

ಎನ್‌ಐಟಿ ತರಗತಿಗಳು ರದ್ದು: ಕಣಿವೆ ರಾಜ್ಯದಲ್ಲಿ ಹೆಚ್ಚುವರಿ ಸೇನೆ, ಅಮರನಾಥ ಯಾತ್ರೆ, ಕಿಶ್ತವಾರ್‌ ಯಾತ್ರೆಗಳು ರದ್ದು ಮುಂತಾದ ಬೆಳವಣಿಗೆಗಳು ಉಂಟಾಗಿರುವ ನಡುವೆಯೇ ಶ್ರೀನಗರದಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಸಂಸ್ಥೆಯು ಅನಿರ್ದಿಷ್ಟಾವಧಿಯವರೆಗೆ ತರಗತಿಗಳನ್ನು ರದ್ದು ಮಾಡಿದೆ. ಸಂಸ್ಥೆಯ ಆದೇಶದ ಹಿನ್ನೆಲೆಯಲ್ಲಿ ಎನ್‌ಐಟಿಯಲ್ಲಿದ್ದ ವಿದ್ಯಾರ್ಥಿಗಳು, ಶುಕ್ರವಾರದಿಂದಲೇ ಸಂಸ್ಥೆಯ ಕ್ಯಾಂಪಸ್ಸನ್ನು ತೆರವುಗೊಳಿಸುತ್ತಿದ್ದಾರೆ. ಎನ್‌ಐಟಿಯನ್ನು ಮುಚ್ಚುವಂತೆ ಕೇಂದ್ರ ಸರ್ಕಾರದಿಂದ ಯಾವುದೇ ಆದೇಶ ಬಂದಿರಲಿಲ್ಲ ಎಂದು ಜಿಲ್ಲಾಧಿಕಾರಿ ಶಾಹೀಬ್‌ ಇಕ್ಬಾಲ್ ಚೌಧರಿ ಸ್ಪಷ್ಟಪಡಿಸಿದ್ದಾರೆ.

ಬ್ರಿಟನ್‌, ಜರ್ಮನಿಯಿಂದ ಎಚ್ಚರಿಕೆ: ಜಮ್ಮು ಕಾಶ್ಮೀರದ ಪ್ರಕ್ಷುಬ್ಧ ಪರಿಸ್ಥಿತಿಯು ವಿಶ್ವದ ಇತರ ರಾಷ್ಟ್ರಗಳಿಗೂ ತಟ್ಟಿದ್ದು, ಈ ನಡುವೆ, ತನ್ನ ಪ್ರಜೆಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿರುವ ಯು.ಕೆ. ಹಾಗೂ ಜರ್ಮನಿ ಸರ್ಕಾರಗಳು, ತಮ್ಮ ಪ್ರಜೆಗಳಿಗೆ ಕಾಶ್ಮೀರಕ್ಕೆ ತೆರಳದಂತೆ ಸೂಚಿಸಿವೆ. ಅಲ್ಲದೆ, ಈಗಾಗಲೇ ಕಾಶ್ಮೀರದಲ್ಲಿರುವ ತಮ್ಮ ಪ್ರಜೆಗಳು ಈ ಕೂಡಲೇ ಸುರಕ್ಷತಾ ಸ್ಥಳಗಳ ಕಡೆಗೆ ತೆರಳುವಂತೆ ಸೂಚಿಸಿದೆ.

7 ನುಸುಳುಕೋರರ ಹತ್ಯೆ

ಗಡಿಯ ಮೂಲಕ ಭಾರತದೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನ ಸೇನೆಯ ಯೋಧರು ಇದ್ದ ಉಗ್ರರ ತಂಡವೊಂದನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಕುಪ್ವಾರಾ ಜಿಲ್ಲೆಯ ಕೇರನ್‌ ಸೆಕ್ಟರ್‌ನಲ್ಲಿ ನಡೆದ ಈ ಘಟನೆಯಲ್ಲಿ ಕನಿಷ್ಠ ಏಳು ಉಗ್ರರು ಹತರಾಗಿದ್ದಾರೆ ಎಂದು ಭಾರತೀಯ ಸೇನೆಯ ವಕ್ತಾರರಾದ ಕರ್ನಲ್ ರಾಜೇಶ್‌ ಕಾಲಿಯಾ ತಿಳಿಸಿದ್ದಾರೆ. ನುಸುಳುಕೋರರ ಈ ತಂಡವು ಪಾಕಿಸ್ತಾನದ ಸೇನೆಯ ಗಡಿ ಕಾರ್ಯಾಚರಣೆ ಪಡೆಯ (ಬ್ಯಾಟ್) ಸಿಬ್ಬಂದಿ ಹಾಗೂ ಉಗ್ರವಾದಿ ತಂಡಗಳ ಸದಸ್ಯರನ್ನು ಒಳಗೊಂಡಿತ್ತು. ಜು. 31 ಮತ್ತು ಆ. 1ರ ಮಧ್ಯರಾತ್ರಿಯೂ ಬ್ಯಾಟ್ ವತಿಯಿಂದ ನಡೆಸಲಾಗಿದ್ದ ಒಳನುಸುಳುವಿಕೆ ಪ್ರಯತ್ನವನ್ನು ಇದೇ ರೀತಿ ನಿಗ್ರಹಿಸಲಾಗಿತ್ತು ಎಂದು ಕಾಲಿಯಾ ವಿವರಿಸಿದ್ದಾರೆ.

ವಾಯುಪಡೆಯಿಂದ ಏರ್‌ಲಿಫ್ಟ್?

ಅಮರನಾಥಯಾತ್ರೆಯಿಂದ ವಾಪಸ್‌ ಹೋಗಿ ಎಂದು ದಿಢೀರ್‌ ಆಗಿ ಹೇಳಿದ್ದರಿಂದ ಯಾತ್ರಿಕರು ಪರದಾಟಕ್ಕೆ ಸಿಲುಕಿದ್ದಾರೆ. ಅಲ್ಲದೆ, ವಿಮಾನಗಳ ಸೇವೆಯು ಗಣನೀಯವಾಗಿ ಇಳಿದಿರುವ ಹಿನ್ನೆಲೆಯಲ್ಲಿ, ವಾಯುಪಡೆ ಹೆಚ್ಚುವರಿ ವಿಮಾನಗಳನ್ನು ಬಳಸಿಕೊಂಡು ಪ್ರಯಾಣಿಕರನ್ನು ದೆಹಲಿ ಮತ್ತಿತರ ಸ್ಥಳಗಳ ಕಡೆಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ. ಸದ್ಯ ರಾಜ್ಯದ ಹಲವಾರು ಪ್ರವಾಸಿ ತಾಣಗಳಲ್ಲಿ ಅಂದಾಜು 22,000 ಪ್ರವಾಸಿಗರಿದ್ದಾರೆ. ಅವರೆಲ್ಲರನ್ನು ಶ್ರೀನಗರಕ್ಕೆ ಕರೆ ತರಲು ವಿಶೇಷ ಬಸ್‌ ಸೌಕರ್ಯ ಕಲ್ಪಿಸಲಾಗಿದೆ. ಜತೆಗೆ ವಾಯುಪಡೆಯ ವಿಮಾನಗಳಲ್ಲಿ ಪ್ರವಾಸಿಗರು ಸಂಬಂಧಪಟ್ಟ ರಾಜ್ಯಗಳಿಗೆ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ.

ಪಾಕಿಸ್ತಾನದ ಸರ್ಜಿಕಲ್ ಸುಳ್ಳು

ಭಾರತದ ವಿರುದ್ಧ ಸದಾ ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಪಾಕಿಸ್ತಾನ, ವಿಶ್ವಸಮುದಾಯಕ್ಕೆ ಭರ್ಜರಿ ಸುಳ್ಳುಗಳನ್ನು ಹೇಳಿದೆ. ಜು.30ರ ವೇಳೆಗೆ ಭಾರತದ ಸೇನೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸಿದ್ದು, ಮಗು ಸೇರಿದಂತೆ ಇಬ್ಬರು ನಾಗರಿಕರು ಸತ್ತಿದ್ದಾರೆ ಎಂದು ಹೇಳಿಕೊಂಡಿದೆ. ಪಾಕ್‌ ಸೇನಾಮುಖ್ಯಸ್ಥ ಮತ್ತು ವಿದೇಶಾಂಗ ಸಚಿವರ ಟ್ವೀಟ್‌ಗಳನ್ನು ಆಧರಿಸಿ ಅಲ್ಲಿನ ಮಾಧ್ಯಮಗಳೂ ಈ ಬಗ್ಗೆ ಸುದ್ದಿಯನ್ನೂ ಮಾಡಿವೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ನಡೆಸಿಲ್ಲ. ಬದಲಾಗಿ ಅಲ್ಲಿಂದ ಉಗ್ರರು ಭಾರತದೊಳಗೆ ನುಸುಳುತ್ತಿದ್ದರು. ಇವರನ್ನು ತಡೆಯಲು ಜು.30 ರಂದು ದಾಳಿ ನಡೆಸಿ, ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದೇವೆ. ಅಲ್ಲಿನ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದಿದೆ. ಅಷ್ಟೇ ಅಲ್ಲ, ಅಂದು ನಡೆದ ಗುಂಡಿನ ಚಕಮಕಿಯಲ್ಲಿ ನಮ್ಮ ಕಡೆಯಲ್ಲಿ ಒಂದು ಹಸುಗೂಸು ಸಹ ಪ್ರಾಣ ಬಿಟ್ಟಿದೆ ಎಂದು ಹೇಳಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ