ಜಾವಾ ಪರಾಕ್‌ ಬಾಬರ್‌ ಬಿಡುಗಡೆ; ಬೆಲೆ 1.9 ಲಕ್ಷ ರೂ.

Team Udayavani, Nov 15, 2019, 5:27 PM IST

ಮುಂಬಯಿ: ಪ್ರಸಿದ್ಧ ದ್ವಿಚಕ್ರ ವಾಹನ ತಯಾರಿಕೆ ಕಂಪೆನಿ ಜಾವಾದ ಹೊಸ ಉತ್ಪನ್ನ, ಬಹುನಿರೀಕ್ಷಿತ ಪರಾಕ್‌ ಬಾಬರ್‌ ಬೈಕ್‌ ಇದೀಗ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ದೇಶಾದ್ಯಂತ 105 ಡೀಲರ್‌ಗಳ ಬಳಿ ಬೈಕ್‌ ಮಾರಾಟವಾಗಲಿದೆ.

ಬಿಎಸ್‌6 ಎಂಜಿನ್‌ ಅನ್ನು ಇದು ಹೊಂದಿದ್ದು, ಎಬಿಎಸ್‌ ಸ್ಟಾಂಡರ್ಡ್‌ ಫೀಚರ್‌ ಆಗಿರಲಿದೆ.334 ಸಿಸಿ ಯ ಸಿಂಗಲ್‌ ಸಿಲಿಂಡರ್‌ ಲಿಕ್ವಿಡ್‌ ಕೂಲ್ಡ್‌ ಎಂಜಿನ್‌, ಇದರಲ್ಲಿದ್ದು 30 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ. ಅಲ್ಲದೇ 31 ಎನ್‌ಎಂ ಟಾರ್ಕ್‌ ಹೊಂದಿದೆ.

ಹೊಸ ಪರಾಕ್‌ ಬಾಬರ್‌ಗೆ ಸಂಪೂರ್ಣ ಭಿನ್ನವಾದ ಚಾಸಿಯನ್ನು ವಿನ್ಯಾಸ ಮಾಡಲಾಗಿದ್ದು, ಇತರ ಜಾವಾ ಬೈಕ್‌ಗಳಿಗಿಂತ ತುಸು ದೊಡ್ಡದಾಗಿದೆ ಮತ್ತು ಎಂಜಿನ್‌ನಲ್ಲೂ ವ್ಯತ್ಯಾಸವಿದೆ. ಪರಾಕ್‌ ಒಂದು ಸೀಟು ಹೊಂದಿರುವ ಆಕರ್ಷಕ ಬೈಕ್‌ ಆಗಿದ್ದು ಹಿಂಭಾಗ ಭಿನ್ನ ರೀತಿಯ ಮೋನೋಶಾಕ್‌ ಮತ್ತು ಮುಂಭಾಗ ಟೆಲಿಸ್ಕೋಪಿಕ್‌ ಶಾಕ್ಸ್‌ ಅಬ್ಸರ್ಬರ್‌ಗಳನ್ನು ಹೊಂದಿದೆ.

ಜತೆಗೆ ಮ್ಯಾಟ್‌ ಬ್ಲ್ಯಾಕ್‌ ಕಲರ್‌, ಭಿನ್ನ ರೀತಿಯ ಟೂಲ್‌ಬಾಕ್ಸ್‌, ಬಾರ್‌ ಎಂಡ್‌ ಮಿರರ್‌ಗಳು, ಆಕರ್ಷಕ ಫೆಂಡರ್‌ ಮತ್ತು ಉದ್ದನೆಯ ಸೈಲೆನ್ಸರ್‌ಗಳನ್ನು ಹೊಂದಿದೆ. ಮುಂದಿನ ವರ್ಷ ಎಪ್ರಿಲ್‌ನಿಂದ ಇದನ್ನು ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶವನ್ನು ಕಂಪೆನಿ ಹೊಂದಿದೆ. ಈವರೆಗೆ ಬಾಬರ್‌ ಶೈಲಿಯ ಬೈಕನ್ನು ಟ್ರಯಂಫ್ ಮಾತ್ರವೇ ಬಿಡುಗಡೆ ಮಾಡುತ್ತಿದ್ದು, ಅದರ ಬೆಲೆ 10 ಲಕ್ಷ ರೂ. ಆಸುಪಾಸಿನಲ್ಲಿದೆ. ಅದಕ್ಕೆ ಹೋಲಿಸಿದರೆ ಜಾವಾ ಬಾಬರ್‌ ಕಡಿಮೆ ಬೆಲೆಯದ್ದಾಗಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡುವ ಉದ್ದೇಶ ಹೊಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ