ನಿರಾತಂಕವಾಗಿ ನಡೆಯಲಿವೆ JEE, NEET ಪರೀಕ್ಷೆ
ಇಂದಿನಿಂದ ಸೆ. 6ರವರೆಗೆ JEE ಮೇನ್; ಸೆ. 13ರಂದು NEET
Team Udayavani, Sep 1, 2020, 6:22 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಮಂಗಳವಾರ, ಸೆ. 1ರಿಂದ ಆರು ದಿನಗಳ ಕಾಲ ಜೆಇಇ ಮೇನ್ ಪರೀಕ್ಷೆ ನಡೆಯಲಿದ್ದು, ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಎಲ್ಲ ರಾಜ್ಯಗಳ ಸಹಕಾರ ಕೋರಿದ್ದಾರೆ.
ಈಗಾಗಲೇ ಮಧ್ಯಪ್ರದೇಶ, ಒಡಿಶಾ, ಛತ್ತೀಸ್ ಗಢ ರಾಜ್ಯಗಳು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿವೆ.
ಮಧ್ಯಪ್ರದೇಶ ಸರಕಾರ ಸಾರಿಗೆ ವ್ಯವಸ್ಥೆ ಮಾಡಿಕೊಡಲಿದೆ. ರಾಜಸ್ಥಾನ, ಪಂಜಾಬ್ ಸರಕಾರಗಳೂ ಆಯಾ ಜಿಲ್ಲಾಡಳಿತಗಳಿಗೆ ಅಗತ್ಯ ಸೌಕರ್ಯ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿವೆ.
ಬಿಜೆಪಿಯೇತರ ರಾಜ್ಯಗಳ ವಿರೋಧದ ನಡುವೆಯೇ ಈ ಪರೀಕ್ಷೆಗಳು ನಿಗದಿಯಂತೆ ನಡೆಯುತ್ತಿವೆ.
8.58 ಲಕ್ಷ ವಿದ್ಯಾರ್ಥಿಗಳು ಜೆಇಇ ಮೇನ್, 15.97 ಲಕ್ಷ ವಿದ್ಯಾರ್ಥಿಗಳು ಸೆ. 13ರಂದು ನೀಟ್ ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ.
ರಾಜ್ಯದಲ್ಲಿ ಎಲ್ಲ ರೀತಿಯ ಸಹಕಾರ
ನೀಟ್ ಮತ್ತು ಜೆಇಇ ಮೇನ್‌ಪರೀಕ್ಷೆಯನ್ನು ನಿರ್ದಿಷ್ಟ ಪರೀಕ್ಷಾ ಏಜೆನ್ಸಿ ನಡೆಸಲಿದ್ದು, ರಾಜ್ಯದಿಂದ ಎಲ್ಲ ಸಹಕಾರವನ್ನು ನೀಡಲು ಸರಕಾರ ನಿರ್ಧರಿಸಿದೆ.
ರಾಜ್ಯದ ಸುಮಾರು 50 ಸಾವಿರ ವಿದ್ಯಾರ್ಥಿಗಳು ಜೆಇಇ ಬರೆಯಲಿದ್ದಾರೆ. 6 ದಿನಗಳ ಕಾಲ ಪರೀಕ್ಷೆ ನಡೆಯುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.
ಪರೀಕ್ಷೆ ನಡೆಸುವ ಸಂಸ್ಥೆಗೆ ರಾಜ್ಯ ಸರಕಾರದಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಿದ್ದೇವೆ ಎಂದು ಡಿಸಿಎಂ, ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
‘ಉದಯವಾಣಿ’ ಜತೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಎಲ್ಲ ವ್ಯವಸ್ಥೆ ಮಾಡಲಿದ್ದೇವೆ ಮತ್ತು ಪರೀಕ್ಷಾ ಏಜೆನ್ಸಿಗೆ ಎಲ್ಲ ರೀತಿಯ ಸಹಕಾರವನ್ನು ಒದಗಿಸಲಿದ್ದೇವೆ ಎಂದಿದ್ದಾರೆ.