ಬೆಂಗಳೂರು ಸೇರಿ ಹಲವೆಡೆ ಐಟಿ ದಾಳಿ: 100 ಕೋಟಿ ಕಪ್ಪು ಹಣ ಪತ್ತೆ
Team Udayavani, Apr 7, 2017, 3:45 AM IST
ನವದೆಹಲಿ: ಬೆಂಗಳೂರು ಸೇರಿದಂತೆ ದೇಶದ 50 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ವೇಳೆ 100 ಕೋಟಿ ರೂ. ಕಪ್ಪು ಹಣ ಪತ್ತೆಯಾಗಿದೆ.
ಅಹಮದಾಬಾದ್ ಮೂಲದ ರಿಯಲ್ ಎಸ್ಟೇಟ್ ಹಾಗೂ ಮೂಲಸೌಲಭ್ಯ ಸಂಸ್ಥೆಗಳ ಮೇಲೆ ದಾಳಿ ನಡೆದಿದೆ. ಇದೇ ವೇಳೆ ರಾಜ್ಕೋಟ್, ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಅಹಮದಾಬಾದ್ ಸೇರಿದಂತೆ 30 ನಗರಗಳಲ್ಲಿ ಏಕಕಾಲಕ್ಕೆ ಐಟಿ ದಾಳಿ ನಡೆಸಲಾಗಿದೆ.
ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ್ ಯೋಜನೆ ಅಡಿಯಲ್ಲಿ ಕಪ್ಪು ಹಣ ಬಹಿರಂಗಪಡಿಸುವ ಗಡುವು ಮುಗಿದ ನಂತರ, ತೆರಿಗೆ ವಂಚನೆ ಪತ್ತೆಹಚ್ಚುವ ನಿಟ್ಟಿನಲ್ಲಿ ನಡೆದಿರುವ ಮೊದಲ ಐಟಿ ದಾಳಿ ಇದಾಗಿದೆ. ದಾಳಿಗೆ ಒಳಗಾದ ಕಂಪನಿಗಳು ಮುಂಬೈಧಿ,ಕೋಲ್ಕತ್ತಾ ಮೂಲದ ಆಪಾದಿತ ಶೆಲ್ ಕಂಪನಿಗಳಿಂದ ಬೋಗಸ್ ಎಂಟ್ರಿ ಡೆಪಾಸಿಟ್ ಪಡೆದಿವೆ. ಇದರೊಂದಿಗೆ ನಕಲಿ ಸಬ್-ಕಾಂಟ್ರಾಕ್ಟ್ ಮತ್ತಿತರ ರೂಪಗಳಲ್ಲಿ 100 ಕೋಟಿ ರೂ. ವೆಚ್ಚಕ್ಕೆ ಸಂಬಂಧಿಸಿದ ನಕಲಿ ದಾಖಲೆ ಸೃಷ್ಟಿಸಿ ತೆರಿಗೆ ವಂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.