ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಗಂಭೀರ ಬೆದರಿಕೆ: CJI ರಂಜನ್‌ ಗೊಗೊಯ್‌ ಕಳವಳ

Team Udayavani, Apr 20, 2019, 7:39 PM IST

ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ ಮಾಡಲಾಗಿರುವ ಲೈಂಗಿಕ ಕಿರುಕುಳದ ಆರೋಪವನ್ನು ತಳ್ಳಿ ಹಾಕಿದರು.

ಮಾಧ್ಯಮದವರು ಈ ರೀತಿಯ ವಿಷಯಗಳನ್ನು ಪ್ರಕಟಿಸುವ ಮುನ್ನ ತುಂಬ ಹೊಣೆಗಾರಿಕೆ ಮತ್ತು ವಿವೇಕವನ್ನು ತೋರಬೇಕು ಹಾಗೂ ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ವರದಿ ಪ್ರಕಟಿಸಬಾರದು ಎಂದು ಹೇಳಿದರು.

ಇಂದು ಶನಿವಾರ ಬೆಳಗ್ಗೆ ಸಿಜೆಐ ರಂಜನ್‌ ಗೊಗೊಯ್‌, ಜಸ್ಟಿಸ್‌ ಅರುಣ್‌ ಮಿಶ್ರಾ ಮತ್ತು ಜಸ್ಟಿಸ್‌ ಸಂಜೀವ್‌ ಖನ್ನಾ ಅವರನ್ನು ಒಳಗೊಂಡ ಸುಪ್ರೀಂ ಪೀಠ, ಅತ್ಯಂತ ಸಾರ್ವಜನಿಕ ಪ್ರಾಮುಖ್ಯದ ವಿಷಯವೊಂದರ ವಿಚಾರಣೆ ನಡೆಯಲಿಕ್ಕಿದೆ ಎಂದು ಪ್ರಕಟಿಸಿತ್ತು. ಇದಕ್ಕಾಗಿ ಪೀಠವು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರನ್ನು ಉಲ್ಲೇಖೀಸಿತ್ತು.

ಈ ಪ್ರಕರಣವು ಕೆಲವೊಂದು ವೆಬ್‌ ಆಧಾರಿತ ಮಾಧ್ಯಮಗಳು, ಮಹಿಳೆಯೊಬ್ಬಳು ಸಿಜೆಐ ವಿರುದ್ಧ ಮಾಡಿದ್ದ ಲೈಂಗಿಕ ಕಿರುಕುಳದ ಆರೋಪ ಕುರಿತ ವರದಿಗೆ ಸಂಬಂಧಿಸಿದ್ದಾಗಿತ್ತು.

ವಿಚಾರಣೆ ವೇಳೆ ಸಿಜೆಐ ಗೊಗೊಯ್‌ ಅವರು, “ಸ್ವತಂತ್ರವಾಗಿ ಉಳಿದುಕೊಂಡು ಬಂದಿರುವ ದೇಶದ ನ್ಯಾಯಾಂಗವನ್ನು ಬುಡಮೇಲು ಮಾಡುವ ಭಾರೀ ದೊಡ್ಡ ಹುನ್ನಾರ ಈ ಪ್ರಕರಣದ ಹಿಂದಿದೆ. ನನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಮಹಿಳೆಯು ಕ್ರಿಮಿನಲ್‌ ಹಿನ್ನೆಲೆ ಹೊಂದಿದವಳಾಗಿದ್ದಾಳೆ’ ಎಂದು ಹೇಳಿದರು.

‘ನ್ಯಾಯಾಂಗದಲ್ಲಿ ಕಳೆದ 20 ವರ್ಷಗಳಿಂದ ನಿಸ್ವಾರ್ಥ ಸೇವೆಯಲ್ಲಿ ತೊಡಗಿಕೊಂಡು ಬಂದಿರುವ ನನ್ನ ಬ್ಯಾಂಕ್‌ ಬ್ಯಾಲನ್ಸ್‌ 6.80 ಲಕ್ಷ ರೂ. ಮತ್ತು ಪ್ರಾವಿಡೆಂಟ್‌ ಫ‌ಂಡ್‌ ನಲ್ಲಿ 40 ಲಕ್ಷ ರೂ. ಇದೆ. ನ್ಯಾಯಾಂಗದ ವಿರುದ್ಧ ಪಿತೂರಿ ನಡೆಸುವ ದುಷ್ಟ ಶಕ್ತಿಗಳಿಗೆ ನನ್ನ ಬಗ್ಗೆ ಬೇರೇನೂ ಸಿಗದ ಕಾರಣಕ್ಕೆ ನನ್ನ ವಿರುದ್ಧ ಆರೋಪ ಮಾಡಲು ನಂಬಿಕೆಗೆ ಅರ್ಹವಲ್ಲದ ಮಹಿಳೆಯೊಬ್ಬಳನ್ನು ಬಳಸಿಕೊಂಡಿವೆ’ ಎಂದು ಸಿಜೆಐ ಹೇಳಿದರು.

ಈ ರೀತಿ ತನ್ನ ವಿರುದ್ಧ ಆರೋಪಗಳನ್ನು ಮಾಡಲು ಕಾರಣ ಏನಿರಬಹುದೆಂಬ ಊಹೆಯಲ್ಲಿ ಸಿಜೆಐ ಗೊಗೊಯ್‌ ಅವರು “ಮುಂದಿನ ವಾರ ನಾನು ಕೆಲವೊಂದು ಬಹು ಮುಖ್ಯ ಕೇಸುಗಳ ವಿಚಾರಣೆ ನಡೆಸಲಿದ್ದು ಅದನ್ನು ನಾನು ಕೈಗೊಳ್ಳದಂತೆ ಮಾಡುವ ಯತ್ನ ಇದಾಗಿರಬಹುದು’ ಎಂದು ಹೇಳಿದರು.

ಮುಂದಿನ ವಾರ ಸಿಜೆಐ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಕೋರ್ಟ್‌ ನಿಂದನೆ ಕೇಸು, ಮೋದಿ ಬಯೋಪಿಕ್‌ ಬಿಡುಗಡೆ ಕೇಸು, ತಮಿಳು ನಾಡಿನಲ್ಲಿ ಮತದಾರರಿಗೆ ಅಪಾರ ಪ್ರಮಾಣದ ಹಣದ ಆಮಿಷ ಒಡ್ಡಲಾಗಿರುವ ಕಾರಣಕ್ಕೆ ಚುನಾವಣೆ ಮುಂದೂಡಲ್ಪಟ್ಟಿರುವ ಕೇಸುಗಳ ವಿಚಾರಣೆ ಕೈಗೊಳ್ಳಲಿದ್ದಾರೆ.

ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವ ಮಹಿಳೆಗೆ ಕ್ರಿಮಿನಲ್‌ ಹಿನ್ನೆಲೆ ಇದ್ದು ಆಕೆ ನಾಲ್ಕು ದಿನ ಜೈಲು ಶಿಕ್ಷೆ ಅನುಭವಿಸಿದ್ದಾಳೆ; ಆಕೆಯ ನಡತೆಯ ವಿರುದ್ಧ ಪೊಲೀಸರು ಆಕೆಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ ಎಂದು ಸಿಜೆಐ ಹೇಳಿದರು.

ಸಾರ್ವಜನಿಕ ಪ್ರಾಮುಖ್ಯದ ಈ ಪ್ರಕರಣದಲ್ಲಿ ಆದೇಶ ಹೊರಡಿಸುವುದರಿಂದ ಸಿಜೆಐ ಗೊಗೊಯ್‌ ಹಿಂದೆ ಸರಿದರೆ, ಉಳಿದಿಬ್ಬರು ನ್ಯಾಯಮೂರ್ತಿಗಳಾದ ಜಸ್ಟಿಸ್‌ ಮಿಶ್ರಾ ಮತ್ತು ಜಸ್ಟಿಸ್‌ ಖನ್ನಾ ಅವರು ಮಾಧ್ಯಮಕ್ಕೆ “ಅತ್ಯಂತ ಜವಾಬ್ದಾರಿ ಮತ್ತು ವಿವೇಕದಿಂದ ಕಾರ್ಯವೆಸಗಬೇಕೆಂದೂ, ಮಹಿಳೆಯ ದೂರಿನ ಸತ್ಯಾಸತ್ಯತೆಯನ್ನು ಪರಾಮರ್ಶಿಸದೆ ವರದಿ ಪ್ರಕಟಿಸಬಾರದೆಂದೂ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ