ಪಾಕ್ ಪಾಶವೀ ಕೃತ್ಯ; ಈಗ ಮೋದಿಗೆ ಬಳೆ ಕಳುಹಿಸಿ ಕೊಡ್ತೀರಾ? ಕಪಿಲ್
Team Udayavani, May 2, 2017, 5:26 PM IST
ನವದೆಹಲಿ:ಭಾರತೀಯ ಸೇನೆಯ ಇಬ್ಬರ ಯೋಧರ ಶಿರಚ್ಛೇದನ ಮಾಡಿ ಹತ್ಯೆಗೈದ ಪಾಕ್ ಮಿಲಿಟರಿ ಪಡೆ ಕೃತ್ಯಕ್ಕೆ ಸಂಬಂಧಿಸಿದಂತೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಲ್ಲದೇ ಪಾಕಿಸ್ತಾನ ಪಾಶವಿ ಕೃತ್ಯದ ಕುರಿತಂತೆ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ನಿಮ್ಮ ಬಳೆಗಳನ್ನು ಕಳಚಿಟ್ಟು, ನೀವು ಏನು ಮಾಡುತ್ತೀರಿ ಎಂಬುದನ್ನು ಪ್ರದರ್ಶಿಸಿ ಎಂದು ಕಪಿಲ್ ಸಿಬಲ್ ಕೇಂದ್ರಕ್ಕೆ ಸವಾಲು ಹಾಕಿದ್ದಾರೆ.
ಬಳೆ ಕಳಚಿಟ್ಟು ಮಾತನಾಡಿ:
ಯುಪಿಎ ಆಡಳಿತಾವಧಿಯಲ್ಲಿ ಮಹಿಳಾ ಸಂಸದೆಯೊಬ್ಬರು ಅಂದು ಮನಮೋಹನ್ ಸಿಂಗ್ ಅವರಿಗೆ ನಿಮಗೆ ತೊಟ್ಟುಕೊಳ್ಳಲು ಬಳೆಗಳನ್ನು ಕಳುಹಿಸಿಕೊಡಲೇ ಎಂದು ಕೇಳಿದ್ದರು. ಅಂದು ಹಾಗೆ ಹೇಳಿದ್ದ ಸಂಸದೆ ಈಗ ಸಚಿವೆಯಾಗಿದ್ದಾರೆ. ಹಾಗಾದರೆ ಆ ಸಚಿವೆ ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಳೆ ಕಳುಹಿಸಿ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಪಾಕ್ ಸೈನಿಕರು ಅಂದು ದಾಳಿ ನಡೆಸಿ ಯೋಧರನ್ನು ಹತ್ಯೆಗೈಯುತ್ತಿದ್ದ ವೇಳೆ ಮನಮೋಹನ್ ಸಿಂಗ್ ವಿರುದ್ಧ ಸಂಸದೆಯಾಗಿದ್ದ ಸ್ಮೃತಿ ಇರಾನಿ 2013ರಲ್ಲಿ ಇಂಧೋರ್ ನಲ್ಲಿ ನಡೆದಿದ್ದ ಬಹಿರಂಗ ಸಮಾರಂಭದಲ್ಲಿ ವ್ಯಂಗ್ಯವಾಡಿದ್ದರು.
ಯೋಧರ ದೇಹವನ್ನು ವಿರೂಪಗೊಳಿಸಿ ಹತ್ಯೆಗೈದಿದ್ದ ಘಟನೆಗೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ್ದ ಸ್ಮೃತಿ ಇರಾನಿ, ಸಿಂಗ್ ಅವರಿಗೆ ಬಳೆಗಳನ್ನು ಕಳುಹಿಸಿಕೊಡಬೇಕು ಎಂದು ಕಿಡಿಕಾರಿದ್ದರು.
ಪಾಕಿಸ್ತಾನ ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಸರ್ಕಾರಕ್ಕೆ ತಿಳಿದಿದ್ದರೂ ಕೂಡಾ, ಪಠಾಣ್ ಕೋಟ್ ಗೆ ಬರುವಂತೆ ಐಎಸ್ಐಗೆ ಕರೆ ಕೊಡುತ್ತಾರೆ, ಅವರು ಪಾಕ್ ಗೆ ತೆರಳಿ ಹುಟ್ಟುಹಬ್ಬದ ಶುಭಾಶಯ ಹೇಳಿ ಬರುತ್ತಾರೆ. ಹಾಗಾಗಿ ಪಾಕಿಸ್ತಾನದಿಂದ ತನಗೆ ಯಾವುದೇ ನಿರೀಕ್ಷೆ ಇಲ್ಲ ಎಂಬುದನ್ನು ಪ್ರಧಾನಿ ಅರ್ಥಮಾಡಿಕೊಳ್ಳಬೇಕು. ಅದೇ ರೀತಿ ಯಾವುದೇ ಆಲಿಂಗನ ಮತ್ತು ಹುಟ್ಟುಹಬ್ಬದ ಆಚರಣೆ ಬೇಕಾಗಿಲ್ಲ ಎಂದು ಸಿಬಲ್ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.